ದೊಡ್ಡಬಳ್ಳಾಪುರ: ಮೋದಿ ಒಬ್ಬ ಮಹಾನ್ ಸುಳ್ಳುಗಾರ, ಬಿಜೆಪಿ ಅಧಿಕಾರಕ್ಕೆ ಬಂದರೆ ಅಚ್ಚೆದಿನ್ ಆಯೇಗ ಎಂದರು ಆದರೇ ಇದುವರೆಗೂ ಆ ಅಚ್ಚೆ ದಿನ ಬಂದಿದ್ದು ನೋಡೆಯೇ ಇಲ್ಲ ಎಂದು ಕಾಂಗ್ರಸ್ ಮುಖಂಡ ಹೆಚ್ ಎಂ ರೇವಣ್ಣ ಬಿಜೆಪಿ ಸರ್ಕಾರವನ್ನು ಟೀಕಿಸಿದರು. ನಗರದ ಕರೇನಹಳ್ಳಿ ಸೇರಿದಂತೆ ವಿವಿಧ ವಾರ್ಡ್ ಗಳಲ್ಲಿ ನಡೆದ ಪ್ರಚಾರ ಕಾರ್ಯದಲ್ಲಿ ಮಾತನಾಡಿದ ಅವರು, ಬಿಜೆಪಿ ಸರ್ಕಾರ ಈ ಬಾರಿ ಫತನವಾಗಲಿದೆ, ಈ ಕುರಿತು ಅನೇಕ ಬಾರಿ ಬಿಜೆಪಿ ಮುಖಂಡರೇ ಆದ ಯತ್ನಾಳ್ ಸೇರಿ ಹಲವು ಶಾಸಕರು ಮತ್ತು ಸಚಿವರು ತಮ್ಮ ಸರ್ಕಾರದ ವಿರುದ್ದವೇ ಆರೋಪಗಳನ್ನು ಮಾಡುತ್ತಿವೆ, ಬಿಜೆಪಿ ಸರ್ಕಾರದಲ್ಲಿ ಒಬ್ಬ ವ್ಯಕ್ತಿ ಸಿಎಂ ಆಗಬೇಕಾದರೇ 250 ಕೋಟಿ ನೀಡಬೇಕು, ಬಿಜೆಪಿ ಸರ್ಕಾರದ ಅವಧಿಯಲ್ಲಿ ಅಭಿವೃದ್ದಿ ಕಾರ್ಯಗಳೇ ಆಗಿಲ್ಲ ಎಂದು ಸ್ವಪಕ್ಷದವರೇ ಆರೋಪಗಳನ್ನು ಮಾಡಿರುವುನ್ನು ಕಾಣಬಹುದು,
ದೊಡ್ಡಬಳ್ಳಾಪುರದ ಸಮಗ್ರ ಅಭಿವೃದ್ದಿಗಾಗಿ ಈಗಾಗಲೇ ಶಾಸಕರು ಬಹಳಷ್ಟು ಶ್ರಮಿಸಿದ್ದಾರೆ, ಮುಂದಿನ ಚುನಾವಣೆಯಲ್ಲಿ ಗೆಲುವು ಸಾಧಿಸಿದರೇ ಖಂಡಿತ ಮಂತ್ರಿಯಾಗುವ ಸಾಧ್ಯತೆ ಇದ್ದೂ ತಾಲ್ಲೂಕನ್ನು ಮತ್ತಷ್ಟು ಅಭಿವೃದ್ದಿ ಪಥದತ್ತ ಕೊಂಡಯ್ಯಲು ಸಾಧ್ಯವಾಗುತ್ತದೆ ಹೀಗಾಗಿ ಅತ ಹೆಚ್ಚಿನ ಸಂಖ್ಯೆಯ ಅಂತರದಲ್ಲಿ ಗೆಲ್ಲಿಸುವಂತೆ ಸಾರ್ವಜನಿಕರಲ್ಲಿ ಮನವಿ ಮಾಡಿಕೊಂಡರು.
ಬಳಿಕ ಮಾತನಾಡಿದ ಶಾಸಕ ವೆಂಕಟರಮಣಯ್ಯ, ಕಾಂಗ್ರೆಸ್ ಪಕ್ಷಕ್ಕೆ ಈ ದೇಶದ ಜನರ ಬಗ್ಗೆ ಕಾಳಜಿ ಇದೆ. ಬೆಲೆ ಏರಿಕೆ ಮಾಡಿ ಜನರ ಜೀವನದ ಬರೆ ಎಳೆಯುವ, ಸೇವಾ ಮನೋಭಾವ ಇಲ್ಲದ ಬಿಜೆಪಿ ಪಕ್ಷವನ್ನು ಮನೆಗೆ ಕಳುಹಿಸಿ ಎಂದ ಅವರು ಕಾಂಗ್ರೆಸ್ ಸರ್ಕಾರ ಜಾರಿಗೆ ತಂದಿದ್ದ ಯೋಜನೆ, ಸವಲತ್ತುಗಳನ್ನು ಬಿಜೆಪಿ ಸರ್ಕಾರ ವಜಾಗೊಳಿಸಿದೆ ಎಂದು ಕಿಡಿಕಾರಿದರು.ನಗರದ ಕರೇನಹಳ್ಳಿ ವಾರ್ಡ್ ನ್ನು ಎಲ್ಲಾ ರೀತಿಯಲ್ಲಿ ಅಭಿವೃದ್ಧಿ ಮಾಡಿ ಸಿಂಗಪುರವನ್ನಾಗಿ ಮಾಡುತ್ತೇನೆ, ಆದ್ದರಿಂದ ನಿದ್ದೆಗಣ್ಣಿನಲ್ಲಿ ಕೂಡ ಕಾಂಗ್ರೆಸ್ ಗೆ ಮತ ನೀಡಿ, ಅಭಿವೃದ್ಧಿ ಕೆಲಸಗಳನ್ನು ಆಶಿಸಿ ಎಂದರು.
ಬಿಜೆಪಿಯ ತನ್ನ ಪ್ರಣಾಳಿಕೆಯ ಭರವಸೆಯನ್ನು ಇದುವರೆಗೂ ಈಡೇರಿಸಿಲ್ಲ, ಇನ್ನೂ ಜಿಎಸ್ ಟಿ, ನೋಟು ಅಮಾನೀಕರಣ ಸೇರಿದಂತೆ ಜನ ವಿರೋಧಿ ನೀತಿಗಳನ್ನು ಜಾರಿಗೆ ತಂದು ಜನ ಸಾಮಾನ್ಯರಿಗೆ ತೊಂದರೆ ಕೊಡುತ್ತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು. ಲೋಕಸಭೆ ಚುನಾವಣೆಯಲ್ಲಿ ಅಚ್ಛೇದಿನ್ ಮಾಡುವ ಆಸ್ವಾಸನೆ ಕೊಟ್ಟ ಬಿಜೆಪಿ. ಅಧಿಕಾರಕ್ಕೆ ಬಂದ ಮೇಲೆ ಒಂದೊಂದೇ ಯೋಜನೆ ಬಂದ್ ಮಾಡುತ್ತಿದ್ದಾರೆ. ಬಿಜೆಪಿ ಸರ್ಕಾರದ ಸಾಧನೆ, ಯೋಜನೆ, ಕೊಡುಗೆ ಶುನ್ಯವಾಗಿದೆ ಎಂದರು.
20 ಎಚ್.ಪಿ ವಿದ್ಯುತ್ ನ್ನು ಉಚಿತವಾಗಿ ಕೊಡುವ ಭರವಸೆ ಕಾಂಗ್ರೆಸ್ ನೀಡಿದೆ, ಇತಿಹಾಸಲ್ಲಿ ನೇಕಾರರಿಗೆ ಮನೆ ಕಟ್ಟಿಕೊಡಲು ಸಹಾಯಧನ ನೀಡಿತು. 175 ಮನೆ ಕೊಟ್ಟಿದ್ದಾರೆ. ಕರೇನಹಳ್ಳಿ ಹಾಗೂ ದರ್ಗಾ ಜೋಗಹಳ್ಳಿಯಲ್ಲಿ ಗುಂಪು ಮನೆ ಕಟ್ಟಿಕೊಡುವ ಯೋಜನೆ ಇದೆ. ಶಾಸಕರ ಋಣ ತೀರಿಸಬೇಕಿದೆ. ಮತ ಭಿಕ್ಷೆ ಹಾಕಬೇಕಾಗಿದೆ ಎಂದು ತಿಳಿಸಿದರು.
ನಂತರ ನಗರಸಭಾ ಸದಸ್ಯ ಮೋಹನ್ ಕುಮಾರ್ ಮಾತನಾಡಿ, ಯಾವ ವಾರ್ಡಿನಲ್ಲೂ ಆಗದ ಅಭಿವೃದ್ಧಿ ಇಲ್ಲಾಗಿದೆ. ಜನರ ಕಷ್ಟ ಸುಖ ಅರಿತು, ರಸ್ತೆಗಳಿಗೆ ಕಾಂಕ್ರಿಟ್ ಹಾಕಿದ್ದಾರೆ. ಓವರ್ ಟ್ಯಾಂಕ್ ನಿರ್ಮಾಣ ಆಗುತ್ತಿದೆ. ಸದ್ಯ ನೀರಿನ ಸಮಸ್ಯೆ ಬಗೆಹರಿದಿದೆ ಎಂದರು. ಈ ವೇಳೆ ಲಕ್ಷ್ಮಿಪತಿ, ರಾಜಘಟ್ಟ ರವಿ, ಕೆ.ಪಿ.ಜಗನ್ನಾಥ್, ಜೆ.ರಾಜೇಂದ್ರ, ಮುನಿರಾಜ್, ಕಾಂತರಾಜ್, ಅಖಿಲೇಶ್, ರಾಜೇಶ್, ಟಿ.ರಾಮಣ್ಣ ಸೇರಿದಂತೆ ಇತರರು ಉಪಸ್ಥಿತರಿದ್ದರು.