ಧಾರವಾಡ: ನಾನು ಯಾವ ಮನೆ ಕಟ್ಟಿ ಬೆಳೆಸಿದ್ದೆನೋ ಅದೇ ಮನೆಯಿಂದ ಇಂದು ನನ್ನನ್ನು ಹೊರ ಹಾಕಿದ್ದಾರೆ ಎಂದು ಮಾಜಿ ಸಿಎಂ ಜಗದೀಶ ಶೆಟ್ಟರ್ ಹೇಳಿದರು. ಧಾರವಾಡದ ಕಡಪಾ ಮೈದಾನದಲ್ಲಿ ಕಾಂಗ್ರೆಸ್ ಪಕ್ಷದ ವತಿಯಿಂದ ಹಮ್ಮಿಕೊಂಡಿದ್ದ ಕಾಂಗ್ರೆಸ್ ಅಭ್ಯರ್ಥಿಗಳ ಪರ ನಡೆದ ಪ್ರಚಾರ ಸಭೆಯಲ್ಲಿ ಅವರು ಮಾತನಾಡಿದರು.
ರಾಜ್ಯದ ಉದ್ದಗಲಕ್ಕೂ ಸಂಚರಿಸಿ ಬಿಜೆಪಿ ಪಕ್ಷವನ್ನು ಕಟ್ಟಿದ್ದೆ. 6 ಬಾರಿ ಶಾಸಕನಾಗಿ ಜನರ ಪ್ರೀತಿ, ವಿಶ್ವಾಸ ಗಳಿಸಿದ್ದೆ. ಆದರೆ, 7ನೇ ಬಾರಿಗೆ ಸ್ಪರ್ಧೆ ಮಾಡಲು ನನಗೆ ಅವಕಾಶ ಕೊಡಲಿಲ್ಲ. ಪಕ್ಷದವರು ಗೌರವಯುತವಾಗಿ ಸ್ಪರ್ಧೆ ಮಾಡಬೇಡಿ ಎಂದಿದ್ದರೆ ನಾನೇ ಸ್ಪರ್ಧೆ ಮಾಡುತ್ತಿರಲಿಲ್ಲ. ಆದರೆ, ಪಕ್ಷದವರು ನನ್ನನ್ನು ಅಗೌರವದಿಂದ ನಡೆಸಿಕೊಂಡರು. ಸಣ್ಣ ಹುಡುಗನಿಗೆ ಹೇಳುವ ಹಾಗೆ ನನಗೆ ಸ್ಪರ್ಧೆ ಮಾಡದಂತೆ ಹೇಳಿದರು. ಅದು ನನ್ನ ಸ್ವಾಭಿಮಾನಕ್ಕೆ ಧಕ್ಕೆಯನ್ನುಂಟು ಮಾಡಿತು. ಪಕ್ಷ ಕಟ್ಟಿ ಬೆಳೆಸಿದವರೇ ಪಕ್ಷ ಬಿಡುವಂತಾಯಿತು ಎಂದರು.
ಬಿಜೆಪಿ ಪಕ್ಷ ಈಗ ಕೆಲವೇ ಕೆಲವರ ಹಿಡಿತದಲ್ಲಿದೆ. ನಾನು ಕಾಂಗ್ರೆಸ್ಗೆ ಸೇರ್ಪಡೆಯಾದಾಗ ಯಾವುದೇ ಬೇಡಿಕೆ ಇಟ್ಟಿರಲಿಲ್ಲ. ಗೌರವದಿಂದ ನನ್ನನ್ನು ನೋಡಿಕೊಳ್ಳಿ ಎಂದು ಮಾತ್ರ ಹೇಳಿದ್ದೆ. ಕಾಂಗ್ರೆಸ್ ಈಗ ಅದೇ ರೀತಿ ನಡೆದುಕೊಳ್ಳುತ್ತಿದೆ. ಚಾಲೆಂಜ್ ಮಾಡಿ ನಾನು ಬಿಜೆಪಿಯಿಂದ ಹೊರಗಡೆ ಬಂದಿದ್ದೇನೆ. ಹುಬ್ಬಳ್ಳಿ ಸೆಂಟ್ರಲ್ನಲ್ಲಿ ನಾನೇ ಗೆಲುವು ಸಾಧಿಸಲಿದ್ದೇನೆ. ನಾನು ಯಾವುದೇ ಅಧಿಕಾರಕ್ಕಾಗಿ ಪಕ್ಷಾಂತರ ಮಾಡಿಲ್ಲ. ಈ ಬಾರಿ ಕಾಂಗ್ರೆಸ್ 150 ಸ್ಥಾನಗಳನ್ನು ಗೆಲ್ಲಲಿದೆ ಎಂದರು.