ಹುಬ್ಬಳ್ಳಿ: ನನಗೆ ನೀಡಿದ 10 ವಷ೯ದ ಕಾಲಾವಧಿಯಲ್ಲಿ ಪ್ರಾಮಾಣಿಕವಾಗಿ ಕ್ಷೇತ್ರದ ಅಭಿವೃದ್ಧಿ ಕಾರ್ಯಗಳನ್ನು ಮಾಡಿದ್ದೇನೆ. ನಾನು ಮಾಡಿದ ಕಾರ್ಯಗಳಿಗೆ ತಾವು ನನಗೆ ಮತ ಹಾಕುವ ಮೂಲಕ ಆಶೀರ್ವಾದ ಮಾಡಬೇಕೆಂದು ಶಾಸಕ ಪ್ರಸಾದ ಅಬ್ಬಯ್ಯ ಜನರಲ್ಲಿ ಮನವಿ ಮಾಡಿಕೊಂಡಿದ್ದಾರೆ. ಅವರು, ಪೂರ್ವ ವಿಧಾನಸಭಾ ಕ್ಷೇತ್ರದ ವಾರ್ಡ್ ಸಂಖ್ಯೆ 75ರಲ್ಲಿ ಬರುವ ನೂರಾನಿ ಪ್ಲಾಟ್, ಕೆ.ಇ.ಬಿ. ಲೇಔಟ್, ಶರಾವತಿ ನಗರ, ಟಿಪು ನಗರ ಸೇರಿದಂತೆ ಸುತ್ತಲಿನ ಪ್ರದೇಶದಲ್ಲಿ ಮನೆ ಮನೆಗೆ ತೆರಳಿ ಮತಯಾಚನೆ ಮಾಡಿ ಮಾತನಾಡಿದರು.
ಕಳೆದ ಹತ್ತು ವರ್ಷದ ಹಿಂದೆ ಕ್ಷೇತ್ರ ಅಭಿವೃದ್ಧಿ ಕಾಣದೆ ಅತ್ಯಂತ ಹಿಂದುಳಿದ ಪ್ರದೇಶವಾಗಿ ಸಾಕಷ್ಟು ಸಮಸ್ಯೆಗಳು ತುಂಬಿಕೊಂಡು ಕ್ಷೇತ್ರ ಜರ್ಜಿತವಾಗಿತ್ತು. ನಾನು ಮೊದಲ ಬಾರಿ ಶಾಸಕನಾಗಿ ಆಯ್ಕೆಯಾದ ಸಂದರ್ಭದಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದಿತ್ತು. ಇದರ ಸದುಪಯೋಗ ಪಡಿಸಿಕೊಂಡ ನಾನು ಸಾವಿರಾರು ಕೋಟಿ ರೂಗಳ ಅನುದಾನವನ್ನು ಆಗಿನ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಕೃಪಾ ಆಶೀರ್ವಾದದಿಂದ ಕ್ಷೇತ್ರಕ್ಕೆ ತಂದಿದ್ದೇನೆ. ಈಗ ಮತ್ತೆ ಕಾಂಗ್ರೆಸ್ ಸರ್ಕಾರ ನೂರಕ್ಕೆ ನೂರು ಅಧಿಕಾರ ವಹಿಸಿಕೊಳ್ಳಲಿದೆ. ತಾವು ಭಾರಿ ಬಹುಮತದೊಂದಿಗೆ ನನ್ನನ್ನು ಗೆಲ್ಲಿಸಬೇಕೆಂದರು.
ಮುಂದಿನ ದಿನಗಳಲ್ಲಿ ಸಾವಿರಾರು ಕೋಟಿ ಅನುದಾನ ಕ್ಷೇತ್ರಕ್ಕೆ ತಂದು ಇಡೀ ಉತ್ತರ ಕರ್ನಾಟಕದಲ್ಲಿಯೇ ಒಂದು ಮಾದರಿ ಕ್ಷೇತ್ರವನ್ನಾಗಿ ರೂಪಿಸುತ್ತೇನೆ. ಕ್ಷೇತ್ರದಲ್ಲಿ ಇದ್ದು ನಿಮ್ಮ ಸೇವೆ ಮಾಡುವುದಾಗಿ ಶಾಸಕ ಪ್ರಸಾದ ಅಬ್ಬಯ್ಯ ಜನರಲ್ಲಿ ಮನವಿ ಮಾಡಿಕೊಂಡರು. ವಾರ್ಡ್ ಸಂಖ್ಯೆ 75ರಲ್ಲಿ ಪ್ರತಿಯೊಂದು ಗಲ್ಲಿ ಗಲ್ಲಿಯಲ್ಲೂ ಕಾಂಕ್ರೀಟ್ ರಸ್ತೆ ಮಾಡಲಾಗಿದೆ. ಒಳಚರಂಡಿ, ಕುಡಿಯು ನೀರು ಸೇರಿದಂತೆ ಸಕಲ ಮೂಲ ಸೌಕರ್ಯ ಒದಗಿಸಲಾಗಿದೆ. ಮುಂದಿನ ದಿನಗಳಲ್ಲಿ ಕ್ಷೇತ್ರದಲ್ಲಿ ಯಾವುದೆ ಸಮಸ್ಯೆ ಇರದಂತೆ ಅಭಿವೃದ್ಧಿ ಪಡಿಸಲಾಗುವುದು ಎಂದು ಶಾಸಕರು ಹೇಳಿದರು.
ಈ ಸಂದರ್ಭದಲ್ಲಿ ಪಾಲಿಕೆ ವಿರೋಧ ಪಕ್ಷದ ನಾಯಕ ದೊರೆರಾಜ ಮಣಿಕುಂಟ್ಲಾ, ಸದಸ್ಯರಾದ ಮನ್ಸೂರಾ ಮುದಗಲ್, ವಾರ್ಡ್ ಕಾಂಗ್ರೆಸ್ ಅಧ್ಯಕ್ಷರಾದ ಮೆಹಬೂಬ್ ನಾಲಬಂದ್, ಅಬ್ದುಲ್ ಖಾದರ್ ಬೆಟಗೇರಿ, ಸೈಯದ್ ಉದಯಗಾರ್, ಹಸನ್ ಪೀರ್ ಜಾದೆ, ಅಸ್ಮಂ ನರಗುಂದ, ಶರೀಫ್ ಇರಕಲ್, ನಜಿರ್ ಮುಲ್ಲಾ, ರಫಿಕ್ ಬೆಲ್ಲೋಗಿ, ಮಝರ್ ಖರಾದಿ, ಫಯಾಜ್ ಜಕಾತಿ, ಶಬ್ಬೀರ್ ದಫೇದಾರ್, ಇಸ್ಮೈಲ್ ಕರಡಿ, ಯೂನಿಸ್ ಹಂಚನಾಳ, ಪ್ರಭು ಪ್ರಭಾಕರ್, ಶಿವಪ್ರಕಾಶ ಬನ್ನಿಗೋಳ, ಪ್ರಸನ್ನಾ ಮಿರಜಕರ್, ಮೆಹಮೂದ್ ಕೊಳೂರು, ಶಕೀಲ್ ಅಹ್ಮದ ಧಾರವಾಡ, ಸಾದಿಕ್ ಜಕೀಮ್, ಮಲಿಕಜಾನ್ ಸಿಕಂದರ್, ರಾಜೇಶ್ವರಿ ಬಿಲಾನಾ, ಹೊಂಗೆಮ್ಮ ದೊಡ್ಡಮನಿ, ಚೇತನಾ ಲಿಂಗದಾಳ, ಅಕ್ಕಮ್ಮ ಕಂಬಳಿ ಸೇರಿದಂತೆ ಮೊದಲಾದವರು ಇದ್ದರು.