ಹುಬ್ಬಳ್ಳಿ: ಪ್ರಸಕ್ತ ಕರ್ನಾಟಕ ವಿಧಾನಸಭೆಯ ಸಾರ್ವತ್ರಿಕ ಚುನಾವಣೆಯಲ್ಲಿ ಬಿಜೆಪಿಯವರು ಹಣ ಬಲ ಮತ್ತು ತೋಳ್ಬಲ ಪ್ರದರ್ಶಿಸುತ್ತಿದ್ದಾರೆ ಎಂದು ಎಐಸಿಸಿ ರಾಷ್ಟ್ರೀಯ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಆರೋಪಿಸಿದರು. ನಗರದ ಖಾಸಗಿ ಹೋಟೆಲ್ ನಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಬಿಜೆಪಿಯವರು ಏನೇ ಮಾಡಿದರೂ ಕೂಡ ರಾಜ್ಯದ ಜನ ಬಿಜೆಪಿಯನ್ನು ಸೋಲಿಸಲು ಪಣ ತೊಟ್ಟಿದ್ದಾರೆ. ರಾಜ್ಯದೆಲ್ಲೆಡೆ ಪಕ್ಷಕ್ಕೆ ಒಳ್ಳೆಯ ವಾತಾವರ ಣವಿದ್ದು, ಈ ಬಾರಿ ಪಕ್ಷ ರಾಜ್ಯದಲ್ಲಿ ಜಯಭೇರಿ ಬಾರಿಸಲಿದೆ ಎಂದರು.
ಅಮಿತ್ ಶಾ ಹೇಳಿಕೆಗೆ ಕಿಡಿ
ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ದಂಗೆ ಆಗುತ್ತೆದೆ ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಹೇಳಿದಾರೆ. ಹೀಗೆ ಪ್ರಚೋದನಕಾರಿಯಾಗಿ ಮಾತನಾಡುವುದನ್ನು ಶಾ ಬಿಡಬೇಕು. ಇಲ್ಲವಾದರೆ ಕಾಂಗ್ರೆಸ್ ಪಕ್ಷ ಅವರ ವಿರುದ್ಧ ಹೋರಾಟ ಮಾಡಬೆಕಾಗುತ್ತದೆ ಎಂದು ಎಚ್ಚರಿಸಿದರು.
ಪ್ರಧಾನಿ ಮೋದಿ ನಾ ಕಾವೊಂಗಾ ನಾ ಖಾನೇದೂಂಗಾ ಎಂದು ಹೇಳುತ್ತಾರೆ. ಆದರೆ, ತಿನ್ನುವವರೇ ಅವರ ಪಕ್ಷದಲ್ಲಿ ಕುಳಿತಿದ್ದಾರೆ. ಹೀಗಿದ್ದರೂ ಕೂಡ ಮೋದಿ ಯಾಕೆ ಸುಮ್ಮನೆ ಕುಳಿತಿದ್ದಾರೆ ಗೊತ್ತಿಲ್ಲ. ನೀವೇನು ಸತ್ಯ ಹರಿಶ್ಚಂದ್ರರೇ ಎಂದು ಕಟುಕಿದರು.ಬಿಜೆಪಿ ಸರ್ಕಾರದ ಮೇಲೆ 40% ಆರೋಪ ಇದೆ. ಈ ಬಗ್ಗೆ ಗುತ್ತಿಗೆದಾರರು ದೂರು ಕೊಟ್ಟರೂ ಕೂಡ ಯಾವುದೇ ಕ್ರಮವಾಗಿಲ್ಲ. ಇದರ ಅರ್ಥ ಏನು ಎಂದು ಪ್ರಶ್ನಿಸಿದ ಖರ್ಗೆ, ಒಂದು ರಾಜ್ಯದ ಚುನಾವಣೆಗಾಗಿ ಮೋದಿ ಮತ್ತು ಶಾ ಅಬ್ಬರದ ಪ್ರಚಾರ ಮಾಡುತ್ತಿದ್ದಾರೆ. ಇದು ಅವರಲ್ಲಿನ ಹತಾಶೆ ಮನೋಭಾವನೆಯನ್ನು ತೋರಿಸುತ್ತದೆ ಎಂದರು.
ದೇಶದಲ್ಲಿ ಒಂದೆಡೆ ಭ್ರಷ್ಟಾಚಾರ ತಾಂಡವಾಡುತ್ತಿದ್ದರೆ, ಮತ್ತೊಂದೆಡೆ ನಿರುದ್ಯೋಗ ಸಮಸ್ಯೆ, ಬಲೆ ಏರಿಕೆಯಿಂದ ಜನ ಕಂಗಾಲಾಗಿದ್ದಾರೆ ಎಂದು ಆಕ್ರೋಶ ಹೊರ ಹಾಕಿದ ಖರ್ಗೆ, ರಾಜ್ಯ ಆಳ್ವಿಕೆ ನಡೆಸಲು ಬಿಜೆಪಿಗರು ಅರ್ಹರಿಲ್ಲ. ಅಲ್ಲದೇ ಅವರಿಗೆ ರಾಜತತ್ವ ನೀತಿಯೂ ಸಹ ಗೊತ್ತಿಲ್ಲ ಎಂದು ಹೇಳಿದರು.ಪ್ರತಿ ಚುನಾವಣೆಯಲ್ಲಿ ಮೋದಿ ನನ್ನ ಮುಖ ನೋಡಿ ಮತ ನೀಡಿ ಎನ್ನುತ್ತಾರೆ. ಗ್ರಾಮ ಪಂಚಾಯತಿ ಚುನಾವಣೆಯಲ್ಲಿಯೂ ನನ್ನ ಮುಖ ನೋಡಿ ಎನ್ನುತ್ತಾರೆ, ಜಿಲ್ಲಾ ಪಂಚಾಯತ , ಮೇಯರ್ ಚುನಾವಣೆಯಲ್ಲಿಯೂ ಸಹ ನನ್ನ ಮುಖ ನೋಡಿ ಮತ ನೀಡಿ ಎನ್ನುತ್ತಾರೆ,. ಮುಖ್ಯಮಂತ್ರಿ ಬೊಮ್ಮಾಯಿ ಅವರೂಕೂಡ ಮುಖ ನೋಡಿ ಮತ ನೀಡಿ ಎನ್ನುತ್ತಾರೆ. ಮೋದಿಯವರ ಮುಖ ಎಷ್ಟು ಬಾರಿ ನೋಡಬೇಕು ಎಂದು ಪ್ರಶ್ನಿಸಿದರು.
ಕೇವಲ ಒಂದು ಸಣ್ಣ ಕಾರಣಕ್ಕಾಗಿ ರಾಹುಲ್ ಗಾಂಧಿ ಅವರನ್ನು ಸಂಸದ ಸ್ಥಾನದಿಂದ ವಜಾ ಮಾಡಿದ್ದಾರೆ. ಆದರೆ ಮೋದಿಯವರ ಗುಜರಾತ್ ನಲ್ಲಿ ಬಿಜೆಪಿ ಸಂಸದರೊಬ್ಬರು ದಲಿತ ವೈದ್ಯರಿಗೆ ಥಳಿಸಿದರೂ ಕೂಡ ಇನ್ನೂವರೆಗೆ ಆತನ ವಿರುದ್ಧ ಯಾವುದೇ ಕ್ರಮ ಕೈಗೊಂಡಿಲ್ಲ. ಆದರೆ ರಾಹುಲ್ ಗಾಂಧಿ ವಿಚಾರದಲ್ಲಿ ಮಾತ್ರ ಒಂದೇ ದಿನದಲ್ಲಿ ವಿಚಾರಣೆ, ತೀರ್ಪು ಮತ್ತು ವಜಾ ಆಗುವಂತಾಯಿತು. ಒಬ್ಬರಿಗೆ ಒಂದು ಮತ್ತೊಬ್ಬರಿಗೆ ಮತ್ತೊಂದು ಎನ್ನುವಂತಾಗಿದೆ ಎಂದರು.
ಕರ್ನಾಟಕವನ್ನು ಕಾಂಗ್ರೆಸ್ ಎಟಿಎಂ ಮಾಡಿಕೊಂಡಿದೆ ಎಂಬ ಆರೋಪಕ್ಕೆ ಪ್ರತಿಕ್ರಿಯೆ ನೀಡಿದ ಖರ್ಗೆಯವರು, ಖಜಾನೆ ಕೀಲಿಯೇ ಅವರ ಬಳಿ ಇದೆ. ಇಂತಹ ಮಾತುಗಳಿಂದ ಜನರ ದಿಕ್ಕು ತಪ್ಪಿಸ ಬಾರದು. ಪ್ರತಿಯೊಂದು ಸರ್ಕಾರದ ಸಂಸ್ಥೆಯನ್ನು ಶ್ರೀಮಂತರು ಕೊಂಡುಕೊಳ್ಳಿತ್ತಿದ್ದಾರೆ ಇದಕ್ಕೆ ಪ್ರಧಾನಿ ಉತ್ತರ ನೀಡಬೇಕೆಂದರು. ಲೋಕಸಭೆ ಚುನಾವಣೆಯಲ್ಲಿ ನಾನು ಸೋತೆ. ಸೋಲು ಸೋಲು ಅಷ್ಟೇ. ನನ್ನ ಸೋಲಿಗೆ ಕಾರಣ ಗೊತ್ತಿದೆ. ಆದರೆ ಅದನ್ನು ಯಾರ ಮೇಲೂ ಹಾಕುವುದಿಲ್ಲ. ಒಬ್ಬ ಕರ್ನಾಟಕದ ಪ್ರತಿನಿಧಿಯಾಗಿ ಕೆಲಸ ಮಾಡಿದ್ಧೇನೆ ಎಂದು ಖರ್ಗೆ ವಿವರಿಸಿದರು.