ಚಿನ್ನಸ್ವಾಮಿ ಕ್ರಿಕೆಟ್ ಕ್ರೀಡಾಂಗಣದಲ್ಲಿ ಬುಧವಾರ ರಾತ್ರಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ವಿರುದ್ಧ ನಡೆದಿದ್ದ ಪಂದ್ಯದಲ್ಲಿ ಐಪಿಎಲ್ ನಿಯಮ ಉಲ್ಲಂಘಿಸಿದ ಕಾರಣ ಕೋಲ್ಕತಾ ನೈಟ್ ರೈಡರ್ಸ್ ತಂಡದ ಆರಂಭಿಕ ಬ್ಯಾಟ್ಸ್ಮನ್ ಜೇಸನ್ ರಾಯ್ಗೆ ಪಂದ್ಯದ ಸಂಭಾವನೆಯಲ್ಲಿ ಶೇ. 10 ರಷ್ಟು ದಂಡ ವಿಧಿಸಲಾಗಿದೆ.
ಪಂದ್ಯದಲ್ಲಿ ಟಾಸ್ ಸೋತು ಮೊದಲು ಬ್ಯಾಟ್ ಮಾಡುವಂತಾಗಿದ್ದ ಕೋಲ್ಕತಾ ನೈಟ್ ರೈಡರ್ಸ್ ತಂಡದ ಪರ ಇನಿಂಗ್ಸ್ ಆರಂಭಿಸಿದ ಜೇಸನ್ ರಾಯ್, ಸ್ಪೋಟಕ ಬ್ಯಾಟ್ ಮಾಡಿದ್ದರು. ಇವರು ಎದುರಿಸಿದ್ದ ಕೇವಲ 29 ಎಸೆತಗಳಲ್ಲಿ 5 ಭರ್ಜರಿ ಸಿಕ್ಸರ್ ಹಾಗೂ 4 ಬೌಂಡರಿಗಳೊಂದಿಗೆ 56 ರನ್ ಗಳಿಸಿದ್ದರು. ಆ ಮೂಲಕ ಕೆಕೆಆರ್ಗೆ ಭರ್ಜರಿ ಆರಂಭ ತಂದುಕೊಟ್ಟಿದ್ದರು.
ಆದರೆ, 10ನೇ ಓವರ್ ಕೊನೆಯ ಎಸೆತದಲ್ಲಿ ವೈಶಾಕ್ ವಿಜಯ್ ಕುಮಾರ್ ಬೌಲಿಂಗ್ನಲ್ಲಿ ಜೇಸನ್ ರಾಯ್ ಬೌಲ್ಡ್ ಆದರು. ಈ ವೇಳೆ ಔಟ್ ಆದ ಬೆಸರದಲ್ಲಿದ್ದ ಅವರು, ಸುಮ್ಮನಿರದೆ ತಮ್ಮ ಬ್ಯಾಟ್ನಿಂದ ಬೇಲ್ಸ್ಗೆ ಹೊಡೆದಿದ್ದರು. ಆ ಮೂಲಕ ಐಪಿಎಲ್ ನಿಯಮ ಉಲ್ಲಂಘಿಸಿದ್ದರು. ಈ ಹಿನ್ನೆಲೆಯಲ್ಲಿ ಅವರಿಗೆ ದಂಡವನ್ನು ವಿಧಿಸಲಾಗಿದೆ.
“ಬೆಂಗಳೂರಿನ ಎಂ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ವಿರುದ್ಧದ ಪಂದ್ಯದಲ್ಲಿ 2023ರ ಟಾಟಾ ಐಪಿಎಲ್ ಟೂರ್ನಿಯ ನಿಯಮ ಉಲ್ಲಂಘಿಸಿದ ಕಾರಣ ಕೋಲ್ಕತಾ ನೈಟ್ ರೈಡರ್ಸ್ ತಂಡದ ಬ್ಯಾಟ್ಸ್ಮನ್ ಜೇಸನ್ ರಾಯ್ ಅವರಿಗೆ ಪಂದ್ಯದ ಸಂಭಾವನೆಯಲ್ಲಿ ಶೇ. 10 ರಷ್ಟು ದಂಡವನ್ನು ವಿಧಿಸಲಾಗಿದೆ,” ಎಂದು ಐಪಿಎಲ್ ಆಡಳಿತ ಮಂಡಳಿ ತನ್ನ ಅಧಿಕೃತ ಹೇಳಿಕೆಯಲ್ಲಿ ತಿಳಿಸಿದೆ.