ಬೆಂಗಳೂರು: ಟೆಂಡರ್ ಆಹ್ವಾನಿಸದೆ ಕೆಲಸ ಮಾಡಿಸಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಬೆಂಗಳೂರಿನ ಹೈಕೋರ್ಟ್ (High Court) ಚಾಟಿ ಬೀಸಿದ ಬಳಿಕ ಎಂಜಿನಿಯರ್ ವಿರುದ್ಧ ಕ್ರಮಕ್ಕೆ ರಾಜ್ಯ ಸರ್ಕಾರ ಮುಂದಾಗಿದೆ. ಅರ್ಜಿಯನ್ನು ನ್ಯಾಯಮೂರ್ತಿ ಎಂ ನಾಗಪ್ರಸನ್ನ ಅವರ ನೇತೃತ್ವದ ಏಕಸದಸ್ಯ ಪೀಠವು ಇತ್ಯರ್ಥಪಡಿಸಿದೆ. ಕೋವಿಡ್ನಿಂದ ಇಡೀ ದೇಶದಲ್ಲಿ ಲಾಕ್ಡೌನ್ ಜಾರಿಯಿದ್ದಾಗ ಟೆಂಡರ್ ಆಹ್ವಾನಿಸದೇ ₹5.02 ಕೋಟಿ ಮೊತ್ತದ ಕಾರ್ಯಾದೇಶ ನೀಡಿ ಕೆಲಸ ಮಾಡಿಸಿದ್ದ ಕಾರ್ಯಕಾರಿ ಎಂಜಿನಿಯರ್ ವಿರುದ್ಧ ಭ್ರಷ್ಟಾಚಾರ ನಿಯಂತ್ರಣ ಕಾಯಿದೆ ಅಡಿ ತನಿಖೆ ನಡೆಸಲು ಅನುಮತಿಸಲಾಗಿದೆ ಎಂದು ರಾಜ್ಯ ಸರ್ಕಾರ ಮಾಹಿತಿ ನೀಡಿದ್ದು,
ಇದನ್ನು ಪರಿಗಣಿಸಿ ಹೈಕೋರ್ಟ್ ಅರ್ಜಿಯನ್ನು ಇತ್ಯರ್ಥಪಡಿಸಿದೆ. “ಹೆಚ್ಚುವರಿ ಅಡ್ವೊಕೇಟ್ ಜನರಲ್ ಅವರು 2023ರ ಏಪ್ರಿಲ್ 11ರಂದು ಕಾರ್ಯಕಾರಿ ಎಂಜಿನಿಯರ್ ವಿರುದ್ಧ ದಾಖಲಾಗಿರುವ ಪ್ರಕರಣದ ತನಿಖೆಗೆ ಭ್ರಷ್ಟಾಚಾರ ನಿಯಂತ್ರಣ ಕಾಯಿದೆ ಅಡಿ ಸಕ್ಷಮ ಪ್ರಾಧಿಕಾರ ಅನುಮತಿಸಿರುವ ಆದೇಶ ಸಲ್ಲಿಸಿದ್ದಾರೆ. ಈ ಸಂದರ್ಭದಲ್ಲಿ ಯಾವುದೇ ರೀತಿಯಲ್ಲಿ ಅಭಿಪ್ರಾಯ ವ್ಯಕ್ತಪಡಿಸಿದರೂ ಅದು ನಿವೃತ್ತ ಕಾರ್ಯಕಾರಿ ಎಂಜಿನಿಯರ್ ಮೂರನೇ ಪ್ರತಿವಾದಿ ಕೆ ಶ್ರೀನಿವಾಸ್ ಅಥವಾ ತನಿಖಾ ಸಂಸ್ಥೆಯ ಮೇಲೆ ಪೂರ್ವಾಗ್ರಹ ಉಂಟು ಮಾಡಲಿದೆ” ಎಂದು ನ್ಯಾಯಾಲಯವು ಆದೇಶದಲ್ಲಿ ಹೇಳಿದೆ.