ಮಂಡ್ಯ : ಮದ್ದೂರು ವಿಧಾನ ಸಭಾ ಕ್ಷೇತ್ರದ ಕೆಸ್ತೂರು ಜಿಲ್ಲಾ ಪಂಚಾಯತಿ ವ್ಯಾಪ್ತಿಯ ವಿವಿಧ ಗ್ರಾಮಗಳಲ್ಲಿ ಕಾಂಗ್ರೆಸ್ ಅಭ್ಯರ್ಥಿ ಕೆ.ಎಂ.ಉದಯ್ ಗುರುವಾರ ಬಿರುಸಿನ ಪ್ರಚಾರ ನಡೆಸಿದರು.
ಆತಗೂರು ಹೋಬಳಿಯ ಯಡಾನಹಳ್ಳಿ, ಅಡಗನಹಳ್ಳಿ, ಕೆಸ್ತೂರು, ಮಾಚಹಳ್ಳಿ, ತೊರೆಶೆಟ್ಟಹಳ್ಳಿ ಹಾಗೂ ವಿವಿಧ ಗ್ರಾಮಗಳಲ್ಲಿ ಕಾಂಗ್ರೆಸ್ ಪಕ್ಷದ ಮುಖಂಡರು ಹಾಗೂ ಕಾರ್ಯಕರ್ತರು ಅಭ್ಯರ್ಥಿ ಉದಯ್ ಅವರನ್ನು ಅದ್ದೂರಿಯಾಗಿ ಬರಮಾಡಿಕೊಂಡರು.
ಇದೇ ವೇಳೆ ಮತದಾರರನ್ನು ಉದ್ದೇಶಿಸಿ ಮಾತನಾಡಿದ ಅಭ್ಯರ್ಥಿ ಉದಯ್ ಕಳೆದ 3 ವರ್ಷಗಳಿಂದ ಕ್ಷೇತ್ರದಲ್ಲಿ ಮಾಡುತ್ತಿರುವ ಸಮಾಜ ಸೇವೆಯನ್ನು ಮುಂದಿಟ್ಟುಕೊಂಡು ಮತ ಕೇಳುತ್ತಿದ್ದೇನೆ. ಪ್ರತಿ ಗ್ರಾಮಗಳಲ್ಲೂ ಉತ್ತಮ ಸ್ಪಂದನೆ ದೊರೆಯುತ್ತಿದ್ದು, ಈ ಬಾರಿ ಮದ್ದೂರು ಕ್ಷೇತ್ರದಲ್ಲಿ ಬದಲಾವಣೆಯಾಗಲಿದೆ ಎಂದರು.
ಈಗಾಗಲೇ ರಾಜ್ಯದಲ್ಲಿ ಬಿಜೆಪಿಯ ಭ್ರಷ್ಟಾಚಾರದ ದುರಾಡಳಿತದಿಂದ ರಾಜ್ಯದ ಜನರು ರೋಸಿ ಹೋಗಿದ್ದಾರೆ. ಬರಿ ಪೊಳ್ಳು ಭರವಸೆಗಳನ್ನು ನೀಡಿ ಜನರಿಗೆ ಹೂ ಮುಡಿಸುವ ಕೆಲಸ ಮಾಡುತ್ತಿದ್ದಾರೆ ಎಂದು ಕಿಡಿಕಾರಿದರು.
ಈ ಭಾರಿ ವಿಧಾನಸಭೆ ಚುನಾವಣೆಯಲ್ಲಿ ನನ್ನನ್ನು ಕ್ಷೇತ್ರದ ಮತದಾರರು ಆಯ್ಕೆ ಮಾಡಿದರೆ, ಕ್ಷೇತ್ರದ ಸಮಗ್ರ ಅಭಿವೃದ್ಧಿಗೆ ಶಕ್ತಿ ಮೀರಿ ದುಡಿಯುತ್ತೇನೆ. ಕಾಂಗ್ರೆಸ್ ಪಕ್ಷದ ಯೋಜನೆಗಳು ಹಾಗೂ ತಮ್ಮ ಸಮಾಜಮುಖಿ ಕಾರ್ಯಗಳನ್ನು ಕ್ಷೇತ್ರದ ಮನೆ ಮನೆಗಳಿಗೆ ತಲುಪಿಸುತ್ತೇನೆ ಹೀಗಾಗಿ ತಮ್ಮ ಕೈ ಬಲಪಡಿಸುವಂತೆ ಕಾಂಗ್ರೆಸ್ ಅಭ್ಯರ್ಥಿ ಕೆ.ಎಂ.ಉದಯ್ ಮತದಾರರಲ್ಲಿ ಮನವಿ ಮಾಡಿದರು.
ಇದೇ ವೇಳೆ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಕದಲೂರು ರಾಮಕೃಷ್ಣ, ತಾ.ಪಂ ಮಾಜಿ ಸದಸ್ಯ ಕೆ.ಆರ್.ಮಹೇಶ್, ರವಿ, ಸತೀಶ್, ಚಾಕನಕೆರೆ ಕುಮಾರ್, ಯತೀಶ್ ಮತ್ತಿತರರು ಇದ್ದರು.
ವರದಿ : ಗಿರೀಶ್ ರಾಜ್ ಮಂಡ್ಯ.