ರೈಪುರ್: ದಾಂತೇವಾಡದ (Dantewada) ಐಇಡಿ ದಾಳಿಯಲ್ಲಿ (IED attack) ಪ್ರಾಣ ಕಳೆದುಕೊಂಡ ಜಿಲ್ಲಾ ಮೀಸಲು ಪಡೆ ಸಿಬ್ಬಂದಿಯ ಪಾರ್ಥೀವ ಶರೀರವನ್ನು ಸಾಗಿಸುವಾಗ ಛತ್ತೀಸ್ಗಢ ಸಿಎಂ ಭೂಪೇಶ್ ಬಘೇಲ್ (Bhupesh Baghel) ಹೆಗಲು ನೀಡಿದ್ದಾರೆ. ಘಟನೆಯಲ್ಲಿ ಹುತಾತ್ಮರಾದ ಯೋಧನ ಅಂತಿಮ ಸಂಸ್ಕಾರದಲ್ಲಿ ಪಾಲ್ಗೊಳ್ಳಲು ಸಿಎಂ ಭೂಪೇಶ್ ಬಘೇಲ್ ತೆರಳಿದ್ದರು. ಈ ವೇಳೆ ಯೋಧನ ಪಾರ್ಥಿವ ಶರಿರವನ್ನು ಸಾಗಿಸಲು ತಮ್ಮ ಹೆಗಲು ನೀಡಿ ಸಹಕರಿಸಿದ್ದಾರೆ. ಈ ವೇಳೆ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು,
ದಾಳಿಯ ಸಂಬಂಧ ಪೊಲೀಸರು ಇಬ್ಬರನ್ನು ಬಂಧಿಸಿದ್ದಾರೆ. ಕಾರ್ಯಾಚರಣೆ ವೇಳೆ ಗುಂಡಿನ ದಾಳಿ ನಡೆದಿದ್ದು ಓರ್ವನನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಮತ್ತೋರ್ವ ನಕ್ಸಲ್ ಸದಸ್ಯ ಪೊಲೀಸ್ ಕಸ್ಟಡಿಯಲ್ಲಿದ್ದಾನೆ ಎಂದು ಅವರು ತಿಳಿಸಿದ್ದಾರೆ. ದುಃಖತಪ್ತ ಕುಟುಂಬಗಳಿಗೆ ಸಾಂತ್ವನ ಹೇಳಿದ ಅವರು ಸೈನಿಕರ ತ್ಯಾಗ ವ್ಯರ್ಥವಾಗುವುದಿಲ್ಲ. ನಕ್ಸಲ್ ಬೆದರಿಕೆಯನ್ನು ಎದುರಿಸಲು ಸೇನೆ ಸದೃಢವಾಗಿದೆ. ಈ ಘಟನೆಯು ಸರ್ಕಾರ ಮತ್ತು ಸೈನಿಕರ ನೈತಿಕ ಸ್ಥೈರ್ಯವನ್ನು ಕೆಡಿಸುವುದಿಲ್ಲ. ಪ್ರತಿಯಾಗಿ ಹೋರಾಡಲು ಸೇನೆ ಸಜ್ಜಾಗಿದೆ ಎಂದಿದ್ದಾರೆ.