ಬೆಂಗಳೂರು: ಕರ್ನಾಟಕ ವಿಧಾನಸಭಾ ಚುನಾವಣಾ (Karnataka Election 2023) ಅಖಾಡ ರಂಗೇರಿದೆ. ಚುನಾವಣೆಗೆ ದಿನಗಣನೆ ಬಾಕಿಯಿದ್ದರೂ ಪಕ್ಷಾಂತರ ಪರ್ವ ಮುಂದುವರಿದಿದೆ. ಈ ನಡುವೆ ಮಾಜಿ ಸಿಎಂ ಹೆಚ್.ಡಿ ಕುಮಾರಸ್ವಾಮಿ (HD Kumaraswamy) ಅವರಿಗೆ ಡಿಕೆ ಬ್ರದರ್ಸ್ ಕನಕಪುರದಲ್ಲಿ ಟಕ್ಕರ್ ಕೊಟ್ಟಿದ್ದಾರೆ. 2018ರ ಚುನಾವಣೆಗೆ ಕನಕಪುರದಲ್ಲಿ ಡಿಕೆಶಿ ವಿರುದ್ಧವೇ ಜೆಡಿಎಸ್ನಿಂದ (JDS) ಕಣಕ್ಕಿಳಿದಿದ್ದ ನಾರಾಯಣಗೌಡ ಹಾಗೂ ಬೆಂಗಳೂರು ದಕ್ಷಿಣ ವಿಧಾನಸಭಾ ಕ್ಷೇತ್ರದಿಂದ ಸ್ಪರ್ಧಿಸಿದ್ದ ಪ್ರಭಾಕರ ರೆಡ್ಡಿ ಕಾಂಗ್ರೆಸ್ ಸೇರ್ಪಡೆಯಾಗಿದ್ದಾರೆ.
ಗುರುವಾರ ಇಲ್ಲಿನ ಕೆಪಿಸಿಸಿ ಕಚೇರಿಯಲ್ಲಿ ಅಧ್ಯಕ್ಷ ಡಿ.ಕೆ ಶಿವಕುಮಾರ್ (DK Shivakumar) ಹಾಗೂ ಸಂಸದ ಡಿ.ಕೆ ಸುರೇಶ್ (DK Suresh) ಸಮ್ಮುಖದಲ್ಲಿ ಕಾಂಗ್ರೆಸ್ ಸೇರ್ಪಡೆಗೊಂಡಿದ್ದಾರೆ. ಪ್ರಭಾಕರ ರೆಡ್ಡಿ ಈ ಬಾರಿಯೂ ಬೆಂಗಳೂರು ದಕ್ಷಿಣ ವಿಧಾನಸಭಾ ಕ್ಷೇತ್ರದಿಂದ ಜೆಡಿಎಸ್ ಟಿಕೆಟ್ ಆಕಾಂಕ್ಷಿಯಾಗಿದ್ದರು. ಆದ್ರೆ ಜೆಡಿಎಸ್ನಿಂದ ಡಿಕೆಶಿ ಆಪ್ತೆ ಸುಷ್ಮಾ ರಾಜಗೋಪಾಲ್ಗೆ ಟಿಕೆಟ್ ನೀಡಿದ ಹಿನ್ನೆಲೆಯಲ್ಲಿ ಪ್ರಭಾಕರ್ ಪಕ್ಷಾಂತರ ಮಾಡಿದ್ದಾರೆ ಎನ್ನಲಾಗಿದೆ.
ಇದೇ ವೇಳೆ ಮಾತನಾಡಿದ ಡಿ.ಕೆ ಶಿವಕುಮಾರ್, ಬೆಂಗಳೂರು ಗ್ರಾಮಾಂತರ ಕ್ಷೇತ್ರದಲ್ಲಿ ಹೊಸ ಬದಲಾವಣೆ ಆಗ್ತಿದೆ. ನಾರಾಯಣಗೌಡ ಅವರು ರೈತ ಕುಟುಂಬದಿಂದ ಬಂದ ನಾಯಕ. ಡಿಕೆಶಿಗೆ ಒಳ್ಳೆಯದಾಗಬೇಕು ಅಂತಾ ಅವರು ತ್ಯಾಗ ಮಾಡಿದ್ದಾರೆ. ಪ್ರಭಾಕರ್ ರೆಡ್ಡಿ ಕೂಡ ಪಕ್ಷ ಸೇರಿದ್ದಾರೆ. ಇಲ್ಲಿ ಹೊಸಬರು, ಹಳಬರು ಎಂಬ ಪ್ರಶ್ನೆ ಇಲ್ಲ. ಎಲ್ಲರೂ ಒಗ್ಗಟ್ಟಿನಿಂದ ಕೆಲಸ ಮಾಡುತ್ತಾರೆ. 78 ಲಕ್ಷ ಸದಸ್ಯರು ಕಾಂಗ್ರೆಸ್ನಲ್ಲಿದ್ದು, ಗ್ಯಾರಂಟಿ ಯೋಜನೆ ಕಾರ್ಡ್ ಮನೆ ಮನೆ ತಲುಪುತ್ತಿದೆ. ಸಮೀಕ್ಷೆಗಳೂ ಕಾಂಗ್ರೆಸ್ ಪರವಾಗಿದ್ದು, ಈ ಬಾರಿ ಕಾಂಗ್ರೆಸ್ ಸ್ಪಷ್ಟ ಬಹುಮತದಿಂದ ಸರ್ಕಾರ ರಚನೆ ಮಾಡಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ.