ಬೆಂಗಳೂರು: ರಾಜ್ಯಾದ್ಯಂತ ಕಾಂಗ್ರೆಸ್ ಪರ ಅಲೆಯಿದೆ ಎಂದು ಕಾಂಗ್ರೆಸ್ ಮುಖಂಡ ರಾಮಲಿಂಗಾ ರೆಡ್ಡಿ(Ramalinga Reddy) ಹೇಳಿದ್ದಾರೆ. ಕೆಪಿಸಿಸಿ ಕಚೇರಿಯಲ್ಲಿ ಅನ್ಯ ಪಕ್ಷದ ಹಲವು ಮುಖಂಡರನ್ನು ಪಕ್ಷಕ್ಕೆ ಬರಮಾಡಿಕೊಂಡು ಮಾತನಾಡಿದರು. 40% ಭ್ರಷ್ಠಾಚಾರ, ನೇಮಕಾತಿಗಳ ಹಗರಣ ಸೇರಿದಂತೆ ಅಗತ್ಯ ವಸ್ತುಗಳ ಬೆಲೆ ಏರಿಕೆಯಿಂದ ರಾಜ್ಯ ಬಿಜೆಪಿ(BJP) ಸರ್ಕಾರದ ವಿರುದ್ಧ ಜನ ಬೇಸತ್ತಿದ್ದಾರೆ. ಪ್ರತಿ ಹಳ್ಳಿಯಲ್ಲೂ ಬಿಜೆಪಿ ದುರಾಡಳಿತದ ವಿರುದ್ಧ ಧ್ವನಿ ಕೇಳಿ ಬರುತ್ತಿದೆ. ಬಿಜೆಪಿ ನಮ್ಮ ಜೀವನವೇ ಹಾಳು ಮಾಡಿದೆ.
ರೈತರ ಬದುಕಿನ ಜೊತೆ ಚೆಲ್ಲಾಟವಾಡುತ್ತಿದೆ. ಕೇಂದ್ರದ ಮೋದಿ ಸರ್ಕಾರ ದೊಡ್ಡ ದೊಡ್ಡ ವ್ಯಾಪಾರಸ್ತರ ಕೈಗೊಂಬೆಯಾಗಿ ಸರ್ಕಾರ ನಡೆಸುತ್ತಿದ್ದು, ಅವರ 12 ಲಕ್ಷ ಕೋಟಿ ಸಾಲಮನ್ನಾ ಮಾಡಿದೆ ಅದೇರೀತಿ 2014ರಿಂದ 2023ವರೆಗೆ ಕೇಂದ್ರ ಸರ್ಕಾರ 103 ಲಕ್ಷ ಕೋಟಿ ಸಾಲ ಮಾಡಿದ್ದಾರೆ. ಇದರಿಂದ ಬಡವರ ಬದುಕು ಬೀದಿಗೆ ಬಂದಂತಾಗಿದೆ, ಆದರೆ ರೈತರ ಸಂಕಷ್ಟವನ್ನು ಅರಿಯುವಲ್ಲಿ ಡಬಲ್ ಎಂಜಿನ್ ವಿಫಲವಾಗಿದೆ’ ಎಂದು ಆರೋಪಿಸಿದರು.
ಕಳೆದ ಚುನಾವಣೆಯ ಸಂದರ್ಭದಲ್ಲಿ ರಾಜ್ಯದ ಬಿಜೆಪಿ ಪಕ್ಷ 600 ಆಶ್ವಾಸನೆಯನ್ನು ಕೊಟ್ಟಿದ್ದರು ಆದರೆ ಈಡೇರಿಸಿದು ಮಾತ್ರ 60 ಆಶ್ವಾಸನೆಗಳನ್ನು ಮಾತ್ರ. ರೈತರ ಆದಾಯ ದುಪ್ಪಟ್ಟು ಮಾಡುತ್ತೇವೆಂದು ಕೇಂದ್ರದ ಬಿಜೆಪಿ ಸರ್ಕಾರ ಹೇಳಿತ್ತು, ರೈತರ ಹತ್ತಿರ ಕೊಡ್ತೀವಿ ಅನ್ನುವುದು ಅದಕ್ಕಿಂತ ಜಾಸ್ತಿ ಕಿತ್ತುಕೊಳ್ಳುವುದು ಡಬಲ್ ಎಂಜಿನ್ ಸರ್ಕಾರದ ಬಹುದೊಡ್ಢ ಸಾಧನೆ. ವಿದೇಶದಿಂದ ಕಪ್ಪುಹಣ ಸೇರಿದಂತೆ ಉದ್ಯೋಗ ಸೃಷ್ಠಿಯ ಭರವಸೆ ಕೇವಲ ಭರವಸೆಯಾಗಿ ಉಳಿದಿದೆ. ಈ ರೀತಿ ಕೇಂದ್ರ ಸರ್ಕಾರ ದೇಶದ ಜನತೆಗೆ ಮೋಸ ಮಾಡುತ್ತಿದೆ’ ಎಂದು ಆಕ್ರೋಶ ವ್ಯಕ್ತಪಡಿಸಿದರು.