ಬೆಂಗಳೂರು: ಚುನಾವಣಾ ನೀತಿ ಸಂಹಿತೆಯ ಬಿಸಿ ಸರಕಾರಿ ಆಸ್ಪತ್ರೆಗಳಲ್ಲಿ ಔಷಧದ ಮೇಲೂ ಪರಿಣಾಮ ಬೀರಿದ್ದು, ರೋಗಿಗಳಿಗೆ ವಿತರಿಸಲು ಔಷಧಗಳ ಕೊರತೆ ಎದುರಾಗಿದೆ. ರೋಗಿಗಳ ಮನೆಯವರು ಹೊರಗಡೆ ಹೋಗಿ ಖರೀದಿ ಮಾಡುವಂತಹ ಸ್ಥಿತಿ ನಿರ್ಮಾಣವಾಗಿದೆ.
ರಾಜ್ಯದ ಎಲ್ಲಸರಕಾರಿ ಆಸ್ಪತ್ರೆ ಹಾಗೂ ಆರೋಗ್ಯ ಕೇಂದ್ರಗಳಿಗೆ ಉಚಿತ ಮತ್ತು ರಿಯಾಯಿತಿ ದರದಲ್ಲಿ ಔಷಧ ಪೂರೈಸುವ ಕರ್ನಾಟಕ ಸ್ಟೇಟ್ ಡ್ರಗ್ಸ್ ಲಾಜಿಸ್ಟಿಕ್ಸ್ ಆ್ಯಂಡ್ ವೇರ್ ಹೌಸಿಂಗ್ ಸೊಸೈಟಿಯ (ಕೆಎಸ್ಡಿಎಲ್ ಆ್ಯಂಡ್ ಡಬ್ಲ್ಯೂಎಸ್) ಉಗ್ರಾಣಗಳಲ್ಲೂಈ ಸ್ಥಿತಿ ತಲೆದೋರಿದೆ. ಹೀಗಾಗಿ, ಸರಕಾರಿ ಆಸ್ಪತ್ರೆಗಳಲ್ಲಿ ಕೆಲವು ಅಗತ್ಯ ಮತ್ತು ಜೀವರಕ್ಷಕ ಔಷಧಿಗಳು ಲಭ್ಯವಾಗದೆ ಶ್ರೀಸಾಮಾನ್ಯರು ಪರದಾಡುವಂತಾಗಿದೆ.
ಪ್ರತಿನಿತ್ಯದ ಅಗತ್ಯ ಔಷಧಗಳನ್ನು ಆಯುಷ್ಮಾನ್ ಭಾರತ್ ಆರೋಗ್ಯ ಕರ್ನಾಟಕ (ಎಬಿಆರ್ಕೆ) ಮತ್ತು ಆರೋಗ್ಯ ರಕ್ಷಾ ಸಮಿತಿ (ಎಆರ್ಎಸ್) ಮೂಲಕ ಸ್ಥಳೀಯವಾಗಿ ಖರೀದಿ ಮಾಡುವಂತೆ ಆರೋಗ್ಯ ಇಲಾಖೆ ಸೂಚಿಸಿದೆ. ಆದರೆ, ಅಲ್ಲಿ ಸಿಗುತ್ತಿರುವುದು ಶೇ.50ರಷ್ಟು ಔಷಧಗಳು ಮಾತ್ರ. ಪರಿಣಾಮ ಶೇ.50 ರಷ್ಟು ಔಷಧ ಎಲ್ಲಿಯೂ ಸಿಗುತ್ತಿಲ್ಲ.
ನಾಯಿ ಕಡಿತ, ಹಾವು ಕಡಿತ ಸೇರಿದಂತೆ ಕೆಲವು ವಿಶೇಷ ಔಷಧಗಳನ್ನು ಸ್ಥಳೀಯವಾಗಿ ಖರೀದಿಸಲು ಸಾಧ್ಯವಿಲ್ಲ. ಅಂತಹ ಔಷಧಗಳನ್ನು ಇಲಾಖೆಯೇ ಪೂರೈಕೆ ಮಾಡಬೇಕಾಗುತ್ತದೆ. ಸದ್ಯ ಇವುಗಳ ಪೂರೈಕೆಯಲ್ಲಿ ವ್ಯತ್ಯಯವಾಗಿದೆ.
ಸ್ಥಳೀಯ ಅನುದಾನ ಬಳಸಿ ಜಿಲ್ಲಾಸ್ಪತ್ರೆಗಳು 25 ಲಕ್ಷ ರೂ. ಮೌಲ್ಯದ ಔಷಧ ಖರೀದಿ ಮಾಡಬಹುದಾಗಿದೆ. ತಾಲೂಕು ಆಸ್ಪತ್ರೆಗೆ 10 ಲಕ್ಷ ರೂ., ಸಮುದಾಯ ಆರೋಗ್ಯ ಕೇಂದ್ರಗಳಿಗೆ 3 ಲಕ್ಷ ರೂ. ಹಾಗೂ ಪ್ರಾಥಮಿಕ ಆರೋಗ್ಯ ಕೇಂದ್ರಗಳಿಗೆ 50 ಸಾವಿರ ರೂ.ವರೆಗೆ ಔಷಧ ಖರೀದಿ ಮಾಡಬಹುದಾಗಿದೆ. ಸದ್ಯ ಇದೇ ಮಾದರಿಯಲ್ಲಿಔಷಧ ಖರೀದಿ ಮಾಡಲಾಗುತ್ತಿದೆ.
ಮೇ 13 ರಂದು ಚುನಾವಣಾ ಫಲಿತಾಂಶ ಹೊರ ಬೀಳಲಿದ್ದು, ಹೊಸ ಸರಕಾರ ರಚನೆಯಾಗುವವರೆಗೂ ಔಷಧದ ಕೊರತೆ ಮುಂದುವರಿಯುವ ಸಾಧ್ಯತೆಯಿದೆ. ಅಂದರೆ ಮೇ ಅಂತ್ಯದವರೆಗೂ ರೋಗಿಗಳು ಔಷಧಕ್ಕಾಗಿ ಪರದಾಡಬೇಕಾಗಬೇಕುತ್ತದೆ. ಹೊಸ ಸರಕಾರ ರಚನೆಯಾದ ನಂತರ ಟೆಂಡರ್ ಕರೆದು ಔಷಧ ಸರಬರಾಜು ಆಗುವವರೆಗೆ ಯಥಾಸ್ಥಿತಿ ಮುಂದುವರಿಯುವ ಸಾಧ್ಯತೆಯಿದೆ.
ಈ ಸ್ಥಿತಿಗೆ ಏನು ಕಾರಣ ?
ಸದ್ಯ ವಾರ್ಷಿಕ ಔಷಧ ಪೂರೈಕೆಯ ಟೆಂಡರ್ ಪಡೆದಿರುವ ಕಂಪನಿಯು ಶೇ. 90ರಷ್ಟು ಔಷಧ ಪೂರೈಕೆ ಮಾಡಿದೆ. ಪ್ರತಿ ವರ್ಷ ಏಪ್ರಿಲ್ನಲ್ಲಿ ಟೆಂಡರ್ ಕರೆಯಲಾಗುತ್ತದೆ. ಈ ವರ್ಷ ವಿಧಾನಸಭೆ ಚುನಾವಣೆ ಹಿನ್ನೆಲೆಯಲ್ಲಿ ನೀತಿ ಸಂಹಿತೆ ಜಾರಿಯಲ್ಲಿರುವುರಿಂದ ಟೆಂಡರ್ ಕರೆದಿಲ್ಲ. ಚುನಾವಣೆ ಮುಗಿದು ಹೊಸ ಸರಕಾರ ಬರುವವರೆಗೂ ಔಷಧದ ವ್ಯತ್ಯಯ ಮುಂದುವರಿಯಲಿದೆ. ಕೆಲವು ಅಗತ್ಯ ಔಷಧಗಳ ಖರೀದಿಗೆ ಅನುಮತಿ ನೀಡುವಂತೆ ಆರೋಗ್ಯ ಇಲಾಖೆ ಈಗಾಗಲೇ ರಾಜ್ಯ ಚುನಾವಣಾ ಆಯೋಗಕ್ಕೆ ಪತ್ರ ಬರೆದಿದೆ.
ಔಷಧ ಸರಬರಾಜಿಗೆ ಸಂಬಂಧಿಸಿದಂತೆ ವಾರ್ಷಿಕ ಟೆಂಡರ್ ಪ್ರಕ್ರಿಯೆ ಮುಕ್ತಾಯವಾಗಿದ್ದು, ವಿಧಾನಸಭಾ ಚುನಾವಣೆ ಹಿನ್ನೆಲೆಯಲ್ಲಿ ನೀತಿ ಸಂಹಿತೆ ಜಾರಿಯಲ್ಲಿರುವುದರಿಂದ ಸದ್ಯ ಟೆಂಡರ್ ಕರೆಯಲು ಸಾಧ್ಯವಾಗುತ್ತಿಲ್ಲ. ನೂತನ ಸರಕಾರ ರಚನೆಯಾದ ನಂತರ ಹೊಸ ಟೆಂಡರ್ ಕರೆಯಲಾಗುತ್ತದೆ. ಅಲ್ಲಿಯವರೆಗೆ ಸ್ವಲ್ಪಮಟ್ಟಿಗೆ ಔಷಧ ಸಮಸ್ಯೆ ಇರಲಿದೆ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸೇವೆಗಳ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸೇವೆಗಳ ಆಯುಕ್ತರು ರಂದೀಪ್ ಡಿ ತಿಳಿಸಿದ್ದಾರೆ