ಬೆಂಗಳೂರು: ಕರ್ನಾಟಕ ವಿಧಾನಸಭಾ ಚುನಾವಣೆಯ ಬಿಸಿ ಮದ್ಯ ಪ್ರಿಯರಿಗೆ ಈ ಬಾರಿ ಭರ್ಜರಿಯಾಗಿ ತಟ್ಟಲಿದೆ. ಏಕೆಂದರೆ ರಾಜ್ಯದಲ್ಲಿ ಒಂದೇ ಹಂತದಲ್ಲಿ ಮತದಾನ ಇದೆ. ಜೊತೆಗೆ ಮತದಾನ ನಡೆದ ಮೂರೇ ದಿನಕ್ಕೆ ಫಲಿತಾಂಶವೂ ಪ್ರಕಟವಾಗುವ ಹಿನ್ನೆಲೆಯಲ್ಲಿ ಈ ಎರಡೂ ಮಹತ್ವದ ದಿನಗಳ ಆಸುಪಾಸಿನಲ್ಲಿ ರಾಜ್ಯಾದ್ಯಂತ ಮದ್ಯ ಮಾರಾಟಕ್ಕೆ ನಿಷೇಧ ಇರಲಿದೆ.
ರಾಜ್ಯದಲ್ಲಿ ಮೇ 10 ರಂದು ಒಂದೇ ಹಂತದಲ್ಲಿ ಮತದಾನ ನಡೆಯಲಿದೆ. ಇನ್ನು ಮೇ 13 ರಂದು ರಾಜ್ಯಾದ್ಯಂತ ಮತ ಎಣಿಕೆ ನಡೆಯಲಿದ್ದು, ಚುನಾವಣಾ ಫಲಿತಾಂಶ ಪ್ರಕಟ ಆಗಲಿದೆ. ಈ ಹಿನ್ನೆಲೆಯಲ್ಲಿ ಶಾಂತಿ ಪಾಲನೆ, ಕಾನೂನು ಸುವ್ಯವಸ್ಥೆ ಹಾಗೂ ಸಾರ್ವಜನಿಕರ ಹಿತದೃಷ್ಟಿಯಿಂದ ಮದ್ಯ ಮಾರಾಟ ಹಾಗೂ ಸಾಗಾಟದ ಮೇಲೆ ನಿರ್ಬಂಧ ಹೇರಲಾಗಿದೆ. ಮುಕ್ತ ಹಾಗೂ ನ್ಯಾಯ ಸಮ್ಮತ ಚುನಾವಣೆ ದೃಷ್ಟಿಯಿಂದಲೂ ಮದ್ಯ ಮಾರಾಟದ ಮೇಲೆ ನಿಷೇಧ ಹೇರೋದು ಅತ್ಯಗತ್ಯವಾಗಿದೆ.
ಯಾವತ್ತು ಮದ್ಯ ಸಿಗೋದಿಲ್ಲ?
ಮೇ 10 ರಂದು ಮತದಾನ ಇರುವ ಹಿನ್ನೆಲೆಯಲ್ಲಿ ಮೇ 8 ರಂದು ಸಂಜೆ 5 ಗಂಟೆಯಿಂದ ಮೇ 10 ರಂದು ಮಧ್ಯರಾತ್ರಿ 12ರ ವರೆಗೆ ಮದ್ಯ ಮಾರಾಟಕ್ಕೆ ರಾಜ್ಯಾದ್ಯಂತ ನಿರ್ಬಂಧ ಇರಲಿದೆ. ಜೊತೆಯಲ್ಲೇ ಮೇ 13 ರಂದು ಫಲಿತಾಂಶ ಇರುವ ಕಾರಣ ಮೇ 12ರ ಮಧ್ಯರಾತ್ರಿ 12 ಗಂಟೆಯಿಂದ ಮೇ 13ರ ಮಧ್ಯರಾತ್ರಿ 12 ಗಂಟೆವರೆಗೆ ರಾಜ್ಯಾದ್ಯಂತ ಮದ್ಯ ಮಾರಾಟಕ್ಕೆ ನಿರ್ಬಂಧ ಇರಲಿದೆ. ಈ ನಿರ್ಬಂಧವು ಮದ್ಯ ಮಾರಾಟ ಮಳಿಗೆ, ಬಾರ್ ಮತ್ತು ರೆಸ್ಟೋರೆಂಟ್, ಮದ್ಯ ತಯಾರಿಸುವ ಡಿಸ್ಟಲರಿ, ಸ್ಟಾರ್ ಹೊಟೇಲ್ಗಳು ಹಾಗೂ ಶೇಂದಿ ಅಂಗಡಿಗಳಿಗೂ ಅನ್ವಯ ಆಗಲಿದೆ. ಹೋಟೆಲ್, ಕ್ಲಬ್ಗಳಲ್ಲೂ ಮದ್ಯ ಮಾರಾಟ ಹಾಗೂ ಸರಬರಾಜು ಮಾಡುವಂತಿಲ್ಲ!
ರಾಜ್ಯದ ಗಡಿ ಭಾಗದ ಜಿಲ್ಲೆಗಳಲ್ಲಿ ಮದ್ಯ ಮಾರಾಟಕ್ಕೆ ಇರುವ ನಿರ್ಬಂಧ ಸ್ವಲ್ಪ ಹೆಚ್ಚಾಗಿಯೇ ತಟ್ಟಲಿದೆ. ಅಕ್ಕ ಪಕ್ಕದ ರಾಜ್ಯಗಳಲ್ಲಿ ಚುನಾವಣೆ ಇಲ್ಲದ ಕಾರಣ ನೆರೆ ರಾಜ್ಯಗಳಿಂದ ಮದ್ಯ ಅಕ್ರಮವಾಗಿ ಸರಬರಾಜಾಗುವ ಸಾಧ್ಯತೆ ಇರುವ ಕಾರಣ ಅಬಕಾರಿ ಇಲಾಖೆ ಹಾಗೂ ಪೊಲೀಸರು ಹೆಚ್ಚಿನ ನಿಗಾ ವಹಿಸಿದ್ದಾರೆ.
ಕರ್ನಾಟಕ ರಾಜ್ಯದ ಗಡಿ ಭಾಗದಲ್ಲಿ ಇರುವ ಅನ್ಯ ರಾಜ್ಯಗಳ ಕನಿಷ್ಟ 5 ಕಿ. ಮೀ. ಅಂತರದ ಗ್ರಾಮಗಳು, ನಗರ, ಪಟ್ಟಣಗಳಲ್ಲೂ ಮದ್ಯ ಮಾರಾಟಕ್ಕೆ ನಿರ್ಬಂದ ಹೇರಲಾಗಿದೆ. ಕರ್ನಾಟಕ ಗಡಿ ಭಾಗದ ಮಹಾರಾಷ್ಟ್ರದ ಲಾತೂರ್ ಜಿಲ್ಲೆಯಲ್ಲಿ ಇರುವ ನಿಲಂಗಾ, ದೇವಾನಿ ಹಾಗೂ ಉದ್ಗಿರ್ ತಾಲ್ಲೂಕುಗಳಲ್ಲಿ ಮದ್ಯ ನಿಷೇಧ ನಿಯಮ ಅನ್ವಯ ಆಗಲಿದೆ. ಇದೇ ನಿಯಮ ತೆಲಂಗಾಣ, ಆಂಧ್ರ ಪ್ರದೇಶ, ಗೋವಾ, ತಮಿಳುನಾಡು ಹಾಗೂ ಕೇರಳ ರಾಜ್ಯಗಳ ಗಡಿ ಭಾಗದ ಗ್ರಾಮಗಳಲ್ಲೂ ಅನ್ವಯ ಆಗಲಿದೆ.