ಬೆಂಗಳೂರು: ಬಸವನಾಡಿನಿಂದಲೇ ಪ್ರಧಾನಿ ಮೋದಿ (Narendra Modi) ರಾಜ್ಯದ ಸಾರ್ವತ್ರಿಕ ಚುನಾವಣೆಯ ಅಖಾಡಕ್ಕೆ ಗ್ರ್ಯಾಂಡ್ ಎಂಟ್ರಿ ಕೊಡುತ್ತಿದ್ದಾರೆ. ಮೊದಲ ಹಂತವಾಗಿ ಬಸವಣ್ಣನ ಕರ್ಮಭೂಮಿ ಬೀದರ್ನಿಂದ ಚುನಾವಣೆಗೆ ಮೋದಿ ಕೇಸರಿ ರಣ ಕಹಳೆ ಮೊಳಗಿಸಲಿದ್ದಾರೆ. ಕಲ್ಯಾಣದ ಅನುಭವ ಮಂಟಪವನ್ನು ಕೇಂದ್ರ ಬಿಂದುವಾಗಿಟ್ಟುಕೊಂಡು ಲಿಂಗಾಯತರ ಒಲೈಕೆ ಹಾಗೂ ಡ್ಯಾಮೇಜ್ ಕಂಟ್ರೋಲ್ಗೆ ಮುಂದಾಗಿದ್ದಾರೆ. ಕಲ್ಯಾಣ ಕರ್ನಾಟಕ ಟಾರ್ಗೆಟ್ ಮಾಡಿರುವ ಮೋದಿ ಶತಾಯಗತಾಯ 25+ ಸೀಟು ಗೆಲ್ಲಲು ರಣತಂತ್ರ ರೂಪಿಸಿದ್ದಾರೆ.
ಬೆಳಗ್ಗೆ 8:20ಕ್ಕೆ ದೆಹಲಿಯಿಂದ ವಿಶೇಷ ವಿಮಾನದ ಮೂಲಕ ಬೀದರ್ಗೆ ಮೋದಿ ಪ್ರಯಾಣ ಬೆಳೆಸಲಿದ್ದಾರೆ. 10:20ಕ್ಕೆ ಬೀದರ್ ಏರಬೇಸ್ಗೆ ಆಗಮಿಸಲಿದ್ದಾರೆ. 10:25ಕ್ಕೆ ಹೆಲಿಕಾಪ್ಟರ್ ಮೂಲಕ ಹುಮ್ನಾಬಾದ್ ಹೆಲಿಪ್ಯಾಡ್ಗೆ ಬರಲಿದ್ದಾರೆ. ಬೆಳಗ್ಗೆ 11ಕ್ಕೆ ಬೃಹತ್ ಬಹಿರಂಗ ಸಮಾವೇಶದಲ್ಲಿ ಮೋದಿ ಪಾಲ್ಗೊಳ್ಳಲಿದ್ದಾರೆ. ನಂತರ ಹುಮ್ನಾಬಾದ್ನಿಂದ ವಿಜಯಪುರಕ್ಕೆ ತೆರಳಲಿದ್ದಾರೆ.
ವಿಜಯಪುರ ನಗರದ ಸೈನಿಕ್ ಶಾಲೆಯಲ್ಲಿ ಮಧ್ಯಾಹ್ನ 1 ಗಂಟೆಗೆ ಸಾರ್ವಜನಿಕ ಸಭೆಯಲ್ಲಿ ಮೋದಿ ಭಾಗಿ ಆಗಲಿದ್ದಾರೆ. ಜಿಲ್ಲೆಯಲ್ಲಿ ಒಟ್ಟು 8 ಮತಕ್ಷೇತ್ರಗಳಿದ್ದು, ಅದರಲ್ಲಿ ಬಹುತೇಕ ಧರ್ಮ ಆಧಾರಿತ ಚುನಾವಣೆ ನಡೆಯಲಿದೆ. ಅದೇ ಕಾರಣಕ್ಕೆ ಮೋದಿ ಆಗಮನ ಬಿಜೆಪಿಗರಲ್ಲಿ ಸಂತಸ ತಂದಿದೆ. ಇನ್ನು 8 ಮತಕ್ಷೇತ್ರದಲ್ಲಿ 7 ಮತಕ್ಷೇತ್ರಗಳಲ್ಲಿ ಬಿಜೆಪಿ ಧ್ವಜ ಹಾರಿಸಲು ಮೋದಿ ಮತ್ತು ಟೀಮ್ ಪ್ಲಾನ್ ಮಾಡಿದೆ.
ಬಿಜೆಪಿ ತೊರೆದಿರುವ ಲಕ್ಷ್ಮಣ ಸವದಿಗೆ ಕಡಿವಾಣ ಹಾಕುವ ಮೂಲಕ ಡ್ಯಾಮೇಜ್ ಕಂಟ್ರೋಲ್ ಮಾಡಲು ಮೋದಿ ರಣತಂತ್ರ ರೂಪಿಸಿದ್ದಾರೆ. ವಿಜಯಪುರ ನಂತರ ಬೆಳಗಾವಿಗೆ ತೆರಳಲಿದ್ದಾರೆ. ಹೆಲಿಕಾಪ್ಟರ್ ಮೂಲಕ ಮಧ್ಯಾಹ್ನ 2:45 ಕ್ಕೆ ಯಬರಟ್ಟಿಗೆ ಆಗಮಿಸಿ ಬಿಜೆಪಿ ಪ್ರಚಾರ ಸಮಾವೇಶದಲ್ಲಿ ಪಾಲ್ಗೊಳ್ಳಲಿದ್ದಾರೆ. ಬಳಿಕ ಮಧ್ಯಾಹ್ನ 3:30ಕ್ಕೆ ಯಬರಟ್ಟಿಯಿಂದ ಹೆಲಿಕಾಪ್ಟರ್ ಮೂಲಕ ಬೆಳಗಾವಿಗೆ ಮೋದಿ ಆಗಮಿಸಿ ಅಲ್ಲಿಂದ ಬೆಂಗಳೂರಿಗೆ ವಿಶೇಷ ವಿಮಾನದಲ್ಲಿ ತೆರಳಲಿದ್ದಾರೆ.
ಬೆಂಗಳೂರಲ್ಲಿ ಮೆಗಾ ರೋಡ್ ಶೋ
ಪ್ರಧಾನಿ ನರೇಂದ್ರ ಮೋದಿ ಅವರು ಬೆಂಗಳೂರಿನಲ್ಲಿ ಮೆಗಾ ರೋಡ್ ಶೋ ನಡೆಸಲಿದ್ದಾರೆ. ಬರೋಬ್ಬರಿ 5.5 ಕಿ.ಮೀ ಉದ್ದದ ರೋಡ್ ಶೋ ಮಾಡಲಿದ್ದಾರೆ. ರೋಡ್ ಶೋಗೆ ಯಶವಂತಪುರದಲ್ಲಿ ಭರ್ಜರಿ ತಯಾರಿ ಮಾಡಿಕೊಳ್ಳಲಾಗಿದೆ. ನೈಸ್ ಜಂಕ್ಷನ್ನಿAದ ಸುಮನಹಳ್ಳಿ ಬ್ರಿಡ್ಜ್ ತನಕ ಮೋದಿ ರೋಡ್ ಶೋ ಇರಲಿದೆ. ಯಶವಂತಪುರ, ಹೆಬ್ಬಾಳ, ಮಲ್ಲೇಶ್ವರಂ, ಮಹಾಲಕ್ಷ್ಮಿಲೇಔಟ್, ದಾಸರಹಳ್ಳಿ, ಆರ್.ಆರ್. ನಗರ, ಯಲಹಂಕ, ಬ್ಯಾಟರಾಯನಪುರ, ಪುಲಿಕೇಶಿನಗರ ಕ್ಷೇತ್ರಗಳ ಮೇಲೆ ಗಮನ ಕೇಂದ್ರೀಕರಿಸಲಾಗಿದೆ. ಒಟ್ಟು ಒಂಭತ್ತು ಕ್ಷೇತ್ರಗಳಿಂದ 1.5 ಲಕ್ಷಕ್ಕೂ ಹೆಚ್ಚು ಜನ ರೋಡ್ ಶೋನಲ್ಲಿ ಭಾಗಿಯಾಗಲಿದ್ದಾರೆ. ನಾಳೆ ಕೋಲಾರ, ಹಾಸನ, ರಾಮನಗರ ಮೈಸೂರಿನಲ್ಲಿ ಮೋದಿ ಪ್ರಚಾರ ನಡೆಸಲಿದ್ದಾರೆ.