ನವದೆಹಲಿ: ಕಾಂಗ್ರೆಸ್ (Congress) ನಾಯಕಿ ಪ್ರಿಯಾಂಕಾ ಗಾಂಧಿ ವಾದ್ರಾ (Priyanka Gandhi Vadra) ಅವರು ದೆಹಲಿಯ ಜಂತರ್ ಮಂತರ್ನಲ್ಲಿ (Jantar Mantar) ಧರಣಿ ನಡೆಸುತ್ತಿದ್ದ ಮಹಿಳಾ ಕುಸ್ತಿಪಟುಗಳನ್ನು ಶನಿವಾರ ಮುಂಜಾನೆ ಭೇಟಿಯಾಗಿದ್ದು, ಪ್ರತಿಭಟನೆಗೆ ಬೆಂಬಲ ವ್ಯಕ್ತಪಡಿಸಿದ್ದಾರೆ. ಕುಸ್ತಿ ಫೆಡರೇಶನ್ ಆಫ್ ಇಂಡಿಯಾ ಮುಖ್ಯಸ್ಥ ಹಾಗೂ ಬಿಜೆಪಿ ಸಂಸದ ಬ್ರಿಜ್ಭೂಷಣ್ ಶರಣ್ ಸಿಂಗ್ (Brij Bhushan Sharan Singh) ವಿರುದ್ಧ ಲೈಂಗಿಕ ದೌರ್ಜನ್ಯ (Sexual Harassment) ಆರೋಪದ ಮೇಲೆ ಪ್ರತಿಭಟನೆ ನಡೆಯುತ್ತಿದೆ.
ಪ್ರತಿಭಟನೆಯ ನೇತೃತ್ವ ವಹಿಸಿರುವ ಮಹಿಳಾ ಕುಸ್ತಿಪಟುಗಳಾದ ಸಾಕ್ಷಿ ಮಲಿಕ್ (Sakshi Malik), ವಿನೇಶ್ ಫೋಗಟ್ (Vinesh Phogat) ಅವರನ್ನು ಪ್ರಿಯಾಂಕಾ ಭೇಟಿಯಾಗಿದ್ದಾರೆ. ಬ್ರಿಜ್ಭೂಷಣ್ ಶರಣ್ ಸಿಂಗ್ ಅವರನ್ನು ಬಂಧಿಸುವಂತೆ ಒತ್ತಾಯಿಸಿ ನಡೆಯುತ್ತಿರುವ ಪ್ರತಿಭಟನೆಗೆ ಒಲಿಂಪಿಕ್ಸ್ ಚಿನ್ನದ ಪದಕ ವಿಜೇತ ನೀರಜ್ ಚೋಪ್ರಾ ಹಾಗೂ ಭಾರತದ ಮಾಜಿ ಕ್ರಿಕೆಟ್ ತಾರೆ ಕಪಿಲ್ ದೇವ್ ಸಹ ಬೆಂಬಲ ಘೋಷಿಸಿದ್ದರು.