ಲಂಡನ್ : ಅಕ್ಟೋಬರ್ನಲ್ಲಿ ಪಾಕಿಸ್ತಾನದಲ್ಲಿ ಚುನಾವಣೆ ನಡೆಯಲಿದೆ ಎಂದು ಎಕನಾಮಿಸ್ಟ್ ಇಂಟೆಲಿಜೆನ್ಸ್ ಯೂನಿಟ್ ಮುನ್ಸೂಚನೆ ನೀಡಿದ್ದು ಇಮ್ರಾನ್ ಖಾನ್ ಮತ್ತೊಮ್ಮೆ ಪಾಕ್ ಪ್ರಧಾನಿಯಾಗುವ ಸಾಧ್ಯತೆ ಇದೆ ಎಂದು ವರದಿಗಳು ಮುನ್ಸೂಚನೆ ನೀಡಿದೆ.
ಅಕ್ಟೋಬರ್ ಮುಂಚೆ ದೇಶದಲ್ಲಿ ಚುನಾವಣೆಗಳು ನಡೆಯುವ ಸಾಧ್ಯತೆ ಕಡಿಮೆ ಇದ್ದು, ಪ್ರಸ್ತುತ ಆಡಳಿತದಲ್ಲಿರುವ ಮೈತ್ರಿಕೂಟ ಸರ್ಕಾರದ ವಿರುದ್ಧ ಜನತೆ ವ್ಯಾಪಕ ಅಸಮಾಧಾನ ಹೊಂದಿದ್ದಾರೆ. ಪಾಕಿಸ್ತಾನದಲ್ಲಿ ರಾಜಕೀಯ ಸ್ಥಿರತೆ ಮತ್ತು ಭದ್ರತೆ ದುರ್ಬಲವಾಗಿದೆ ಮತ್ತು ಆರ್ಥಿಕ ಬೆಳವಣಿಗೆಯು 2023 ರಲ್ಲಿ ವಾಸ್ತವಿಕವಾಗಿ ನಿಧಾನವಾಗಲಿದೆ ಎಂದು ಎಕನಾಮಿಸ್ಟ್ ಗ್ರೂಪ್ EIU ನ ವಿಶ್ಲೇಷಣಾ ವಿಭಾಗ ತಿಳಿಸಿದೆ.
ಪಾಕಿಸ್ತಾನದಲ್ಲಿ 2023 ರಲ್ಲಿ ಸಾರ್ವತ್ರಿಕ ಚುನಾವಣೆಗಳು ನಡೆಯಲಿವೆ. ಅಲ್ಲಿ ಪ್ರಸ್ತುತ ಪ್ರಧಾನಿ ಶೆಹಬಾಜ್ ಷರೀಫ್ ನೇತೃತ್ವದ ಆಡಳಿತಾರೂಢ ಪಿಎಂಎಲ್ – ಎನ್ ಒಕ್ಕೂಟದ ಮೇಲೆ ಜನರಿಗೆ ವ್ಯಾಪಕ ಅಸಮಾಧಾನವಿರುವ ಕಾರಣದಿಂದ ಇಮ್ರಾನ್ ಖಾನ್ ನೇತೃತ್ವದ ಪಾಕಿಸ್ತಾನ್ ತೆಹ್ರೀಕ್ ಇ ಇನ್ಸಾಫ್ (ಪಿಟಿಐ) ಪಕ್ಷ ಮತ್ತೆ ಗೆಲ್ಲಲಿದೆ ಎಂದು ನಾವು ನಿರೀಕ್ಷಿಸುತ್ತೇವೆ ಎಂದು ವರದಿ ತಿಳಿಸಿದೆ.
ಪಾಕಿಸ್ತಾನದಲ್ಲಿ ಸದ್ಯ ಚಾಲ್ತಿಯಲ್ಲಿರುವ ಅಸೆಂಬ್ಲಿಯ ಅವಧಿ ಆಗಸ್ಟ್ಗೆ ಕೊನೆಗೊಳ್ಳಲಿದೆ. ಅದರ ನಂತರ ಅಕ್ಟೋಬರ್ನಲ್ಲಿ ಚುನಾವಣೆ ನಡೆಯಬಹುದು. ಆದರೆ ಸದ್ಯ ದೇಶದಲ್ಲಿನ ತೀವ್ರ ಆರ್ಥಿಕ ಬಿಕ್ಕಟ್ಟನ್ನು ನೋಡಿದರೆ ಅದಕ್ಕೂ ಮೊದಲೇ ಚುನಾವಣೆಗಳು ನಡೆದರೂ ಆಶ್ಚರ್ಯವಿಲ್ಲ. ಪಾಕಿಸ್ತಾನವು ತನ್ನ ವಿದೇಶಿ ಸಾಲಗಳನ್ನು ತೀರಿಸಲಾಗದೆ ಪರದಾಡುತ್ತಿದೆ. ಈ ಬಿಕ್ಕಟ್ಟು ಶಮನ ಮಾಡಬೇಕಾದರೆ ಜನರಿಗೆ ತೀರಾ ಹೊರೆಯಾಗಬಹುದಾದ ಆರ್ಥಿಕ ಸುಧಾರಣಾ ಕ್ರಮಗಳನ್ನು ಕೈಗೊಳ್ಳಬೇಕಾಗುತ್ತದೆ. ಒಟ್ಟಾರೆಯಾಗಿ ಇಮ್ರಾನ್ ಕಾನ್ ಮತ್ತೊಮ್ಮೆ ಗೆದ್ದು ಪ್ರಧಾನಿಯಾಗುವ ಎಲ್ಲ ಸಾಧ್ಯತೆ ಇದ್ದು, ಅವರೇ ಐಎಂಎಫ್ನೊಂದಿಗೆ ಮತ್ತೆ ಮಾತುಕತೆ ನಡೆಸಬೇಕಾಗುತ್ತದೆ ಎಂದು ವರದಿ ಹೇಳಿದೆ.