ದೇಶದಾದ್ಯಂತ ಸುದ್ದಿಯಾಗಿದ್ದ ಬಾಲಿವುಡ್ ನಟಿ ಜಿಯಾ ಖಾನ್ ಸಾವಿನ ಕುರಿತು 10 ವರ್ಷಗಳ ಬಳಿಕ ತೀರ್ಪು ಹೊರ ಬಿದ್ದಿದೆ. ಜಿಯಾ ಸಾವು ಆತ್ಮಹತ್ಯೆಯಾಗಿದ್ದು ಎಂದು ಕೋರ್ಟ್ ತೀರ್ಪು ನೀಡಿದೆ. ನಟಿಯ ಸಾವಿನ ಪ್ರಕರಣದಲ್ಲಿ ಆರೋಪಿಯಾಗಿದ್ದ ನಟ ಸೂರಜ್ ಪಂಚೋಲಿ ಖುಲಾಸೆಗೊಂಡಿದ್ದು ಸತ್ಯ ಯಾವಾಗಲು ಗೆಲ್ಲುತ್ತದೆ ಎಂದು ಪ್ರತಿಕ್ರಿಯೆ ನೀಡಿದ್ದಾರೆ.
ತಾಯಿಯೊಂದಿಗೆ ನ್ಯಾಯಾಲಯಕ್ಕೆ ಹಾಜರಾಗಿದ್ದ ಸೂರಜ್ ಪಂಚೋಲಿ ನ್ಯಾಯಾಲಯದ ಬಳಿ ಮಾದ್ಯಮಗಳಿಗೆ ಪ್ರತಿಕ್ರಿಯಿಸಲು ನಿರಾಕರಿಸಿದರು. ಆ ಬಳಿಕ ಇನ್ಸ್ಟಾಗ್ರಾಂನಲ್ಲಿ ‘ಸತ್ಯ ಸದಾ ಗೆಲ್ಲುತ್ತದೆ, ದೇವರು ಗೆಲ್ಲುತ್ತಾನೆ’ ಎಂದು ಪೋಸ್ಟ್ ಮಾಡಿದ್ದಾರೆ. ಅಲ್ಲದೆ ತಮ್ಮ ಮನೆಯ ಬಳಿ ಸಿಹಿ ಹಂಚಿ ತೀರ್ಪನ್ನು ಸಂಭ್ರಮಿಸಿದ್ದಾರೆ ಎನ್ನಲಾಗುತ್ತಿದೆ.
ಮಗಳ ಸಾವಿನ ತೀರ್ಪಿನ ಕುರಿತು ಪ್ರತಿಕ್ರಿಯಿಸಿರುವ ಜಿಯಾ ಖಾನ್ ತಾಯಿ, ಆತ್ಮಹತ್ಯೆ ಪ್ರಕರಣದಲ್ಲಿ ಸೂರಜ್ ಖುಲಾಸೆ ಆಗಿದ್ದಾನೆ ಆದರೆ ಕೊಲೆ ಪ್ರಕರಣದ ವಿಚಾರಣೆ ಇನ್ನೂ ನಡೆಯುತ್ತಿದೆ. ನಾನು ಭರವಸೆ ಕಳೆದುಕೊಳ್ಳುವುದಿಲ್ಲ ನ್ಯಾಯಕ್ಕಾಗಿ ಹೋರಾಡುತ್ತೇನೆ, ತೀರ್ಪನ್ನು ನಾವು ಹೈಕೋರ್ಟ್ನಲ್ಲಿ ಪ್ರಶ್ನೆ ಮಾಡುತ್ತೇವೆ, ಅವಶ್ಯಕತೆ ಬಿದ್ದರೆ ಸುಪ್ರೀಂಕೋರ್ಟ್ಗೂ ಹೋಗುತ್ತೇನೆ, ನನ್ನ ಮಗಳಿಗೆ ನ್ಯಾಯ ದೊರಕಿಸಿಕೊಡಲು ಹೋರಾಡುತ್ತೇನೆ ಎಂದಿದ್ದಾರೆ.