ಬಾಲಿವುಡ್ ನಟಿ ಜಿಯಾ ಖಾನ್ ಸಾವಿನ ಕುರಿತು ಹತ್ತು ವರ್ಷಗಳ ಬಳಿಕ ಸಿಬಿಐ ವಿಶೇಷ ಕೋರ್ಟ್ ತೀರ್ಪು ಪ್ರಕಟಿಸಿದೆ. ಜಿಯಾ ಸಾವಿನ ಪ್ರಮುಖ ಆರೋಪಿ ಹಾಗೂ ಜಿಯಾ ಗೆಳೆಯ ಸೂರಜ್ ಪಂಚೋಲಿಯನ್ನು ನಿರ್ದೋಷಿ ಎಂದು ತೀರ್ಪು ನೀಡಿದೆ. ಈ ತೀರ್ಪಿನ ವಿರುದ್ಧ ಹೈಕೋರ್ಟ್ ಮೆಟ್ಟಿಲೇರುವುದಾಗಿ ಜಿಯಾ ತಾಯಿ ರಬಿಯಾ ಪ್ರತಿಕ್ರಿಯೆ ನೀಡಿದ್ದಾರೆ.
ನನ್ನ ಮಗು ಹೇಗೆ ಸತ್ತಿತು ಎನ್ನುವುದರ ಸತ್ಯ ನನಗೆ ಗೊತ್ತಾಗಬೇಕು. ಇದೊಂದು ಕೊಲೆ ಎಂದು ಮತ್ತೆ ರಬಿಯಾ ಹೇಳಿದ್ದು ಇದೀಗ ನೀಡಿರುವ ತೀರ್ಪು ನಮಗೆ ಸಮಂಜಸವಾಗಿಲ್ಲ. ಹಾಗಾಗಿ ಮತ್ತೆ ಜೀಯಾ ಸಾವಿಗೆ ನ್ಯಾಯ ಕೇಳಲು ಹೈಕೋರ್ಟ್ ಮೆಟ್ಟಿಲೇರುವುದಾಗಿ ಹೇಳಿದ್ದಾರೆ.
ಬಾಲಿವುಡ್ ನಟಿ ಜಿಯಾ ಖಾನ್ ಸಾವಿನ ಪ್ರಕರಣ ಬಾಲಿವುಡ್ ಸಿನಿಮಾ ರಂಗದಲ್ಲಿ ಭಾರೀ ಆಘಾತ ಮೂಡಿಸಿತ್ತು. ಚಿತ್ರರಂಗದಲ್ಲಿ ಆಗ ತಾನೆ ಮಿಂಚುತ್ತಿದ್ದ ಜಿಯಾ ಏಕಾಏಕಿ 2013ರ ಜೂನ್ 3ರಂದು ಮುಂಬೈನ ಜುಹೂ ಅಪಾರ್ಟ್ ಮೆಂಟ್ ನಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ಅವರ ಶವ ಪತ್ತೆಯಾಗಿತ್ತು. ಈ ಸಾವಿಗೆ ಅವರ ಬಾಯ್ ಫ್ರೆಂಡ್ ಸೂರಜ್ ಪಾಂಚೋಲಿ ಕಾರಣ ಎಂದು ಹೇಳಲಾಗಿತ್ತು.
ಜಿಯಾ ಖಾನ್ ಬರೆದ ಡೆತ್ ನೋಟ್ ಆಧರಿಸಿ ಪ್ರಿಯಕರ ಸೂರಜ್ ಪಾಂಚೋಲಿ ಮೇಲೆ ಕೇಸ್ ದಾಖಲಿಸಿ ಜೈಲಿಗೆ ಕಳುಹಿಸಲಾಗಿತ್ತು. ಆನಂತರ ಜುಲೈನಲ್ಲಿ ಸೂರಜ್ ಜಾಮೀನು ಪಡೆದರು. ಜಿಯಾ ಖಾನ್ ಅವರ ತಾಯಿ ರಬಿಯಾ ನಂತರ ವಿಶೇಷ ಮನವಿ ಸಲ್ಲಿಸಿದ ಮೇರೆಗೆ ಪ್ರಕರಣವನ್ನು ಸಿಬಿಐಗೆ ವರ್ಗಾಯಿಸಲಾಗಿತ್ತು. ಇದೀಗ ಕೋರ್ಟ್ ತೀರ್ಪು ಪ್ರಕಟವಾಗಿದ್ದು ಸೂರಜ್ ಪಂಚೋಲಿ ನಿರಪರಾಧಿ ಎಂದು ತೀರ್ಪು ಪ್ರಕಟಿಸಿದೆ.