ಬೆಂಗಳೂರು: ಮುಂದಿನ ಆರು ತಿಂಗಳಲ್ಲಿ ರಾಜ್ಯದ ಮೂರು ಕಂದಾಯ ವಿಭಾಗಗಳಲ್ಲಿ ಎನ್ಐಎ ವಿಶೇಷ ನ್ಯಾಯಾಲಯ ಸ್ಥಾಪಿಸಲು ಬೆಂಗಳೂರಿನ ಹೈಕೋರ್ಟ್ (High Court)ಪೀಠ ರಾಜ್ಯ ಸರ್ಕಾರಕ್ಕೆ ಶಿಫಾರಸು ಮಾಡಿದೆ. ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಬಿ ವೀರಪ್ಪ ಮತ್ತು ನ್ಯಾಯಮೂರ್ತಿ ಟಿ ವೆಂಕಟೇಶ್ ನಾಯಕ್ ಅವರಿದ್ದ ನ್ಯಾಯಪೀಠ ಈ ಸೂಚನೆ ನೀಡಿದೆ. ಅಲ್ಲದೇ, ಆರೋಪಿಗಳಿಗೆ ಜಾಮೀನು ನಿರಾಕರಿಸಿದ್ದ ಎನ್ಐಎ ನ್ಯಾಯಾಲಯದ ಆದೇಶವನ್ನು ಎತ್ತಿಹಿಡಿದಿದೆ. ರಾಷ್ಟ್ರೀಯ ತನಿಖಾ ಸಂಸ್ಥೆ ಕಾಯ್ದೆಯಡಿ ರಾಜ್ಯ ಸರ್ಕಾರ ಇಡೀ ರಾಜ್ಯಕ್ಕೆ ಬೆಂಗಳೂರು ನಗರದಲ್ಲಿ ಮಾತ್ರ ಒಂದು ವಿಶೇಷ ನ್ಯಾಯಾಲಯ ರಚನೆ ಮಾಡಿದೆ.
ಎನ್ಐಎ ಪ್ರಕರಣಗಳನ್ನು ಪರಿಶೀಲಿಸಿದಾಗ ಸುಮಾರು 8 ರಿಂದ 9 ವರ್ಷಗಳ ಹಳೆಯ ಪ್ರಕರಣಗಳು ಬಾಕಿ ಉಳಿದಿವೆ. ನ್ಯಾಯಾಂಗ ಪ್ರಸ್ತುತ ಸಾರ್ವಜನಿಕರ ನಂಬಿಕೆಯ ಅಂತಿಮ ಹಾಗೂ ಕೊನೆಯ ಕೇಂದ್ರ ಬಿಂದುವಾಗಿದೆ. ಎಲ್ಲ ಕಡೆಗಳಲ್ಲಿ ನ್ಯಾಯ ಲಭ್ಯವಾಗದಿದ್ದಾಗ ಜನ ಅಂತಿಮವಾಗಿ ನ್ಯಾಯಾಲಯದ ಕದ ತಟ್ಟುತ್ತಾರೆ. ಧರ್ಮ, ಜಾತಿ ಲಿಂಗ ಅಥವಾ ಜನ್ಮ ಸ್ಥಳವನ್ನು ಲೆಕ್ಕಿಸದೆ ಪ್ರತಿಯೊಬ್ಬರು ಗೌರವಿಸುವ ಸ್ಥಳವೇ ನ್ಯಾಯಾಲಯವಾಗಿದೆ. ಇತರ ಅಧಿಕಾರಗಳಿಗಿಂತಲೂ ನ್ಯಾಯಾಂಗಕ್ಕೆ ಹೆಚ್ಚು ಅಧಿಕಾರವಿದ್ದು,
ಕಟ್ಟುನಿಟ್ಟಿನ ನಿರ್ಣಯವನ್ನು ಕೈಗೊಳ್ಳಲಾಗುತ್ತಿದೆ. ಜತೆಗೆ, ನ್ಯಾಯಾಂಗದ ಮೊರೆ ಹೋಗುವವರಿಗೆ ಸಕಾಲಕ್ಕೆ ನ್ಯಾಯವನ್ನು ಒದಗಿಸುವುದು ನ್ಯಾಯಾಲಯದ ಕರ್ತವ್ಯವಾಗಿದೆ. ಹೀಗಾಗಿ, ಜನತೆಗೆ ಶೀಘ್ರ ಮತ್ತು ತ್ವರಿತ ನ್ಯಾಯಾಧಾನ ಮಾಡುವುದಕ್ಕೆ ರಾಜ್ಯದ ಇತರೆ ಕಂದಾಯ ವಿಭಾಗಗಳಾದ ಮೈಸೂರು, ಬೆಳಗಾವಿ ಮತ್ತು ಕಲಬುರಗಿಯಲ್ಲಿ ವಿಶೇಷ ನ್ಯಾಯಾಲಯಗಳನ್ನು ರಚನೆ ಮಾಡುವುದಕ್ಕೆ ಇದು ಸೂಕ್ತ ಸಮಯವಾಗಿದೆ ಎಂದು ಪೀಠ ತಿಳಿಸಿದೆ.