ಬೆಂಗಳೂರು: ಸೋನಿಯಾ ಗಾಂಧಿ ಅವರು ವಿಷಕನ್ಯೆ ಎಂಬ ಬಸನಗೌಡ ಪಾಟೀಲ್ ಯತ್ನಾಳ್ (Basanagowda Patil Yatnal) ಹೇಳಿಕೆ ಕುರಿತು ಉನ್ನತ ಶಿಕ್ಷಣ ಸಚಿವ ಡಾ. ಸಿ ಎನ್ ಅಶ್ವಥ್ ನಾರಾಯಣ್(Minister Dr. CN Aswath Narayan) ಅವರು ಪ್ರತಿಕ್ರಿಯೆ ನೀಡಿದ್ದಾರೆ. ಈ ಸಂಬಂಧ ಮಲ್ಲೇಶ್ವರದ ಬಿಜೆಪಿ ಕಚೇರಿಯಲ್ಲಿ(Malleshwar BJP office) ಮಾತನಾಡಿದ ಅವರು, ಪ್ರಧಾನಿ ಮೋದಿ ವಿರುದ್ಧ ಮಲ್ಲಿಕಾರ್ಜುನ ಖರ್ಗೆ ನೀಡಿದ್ದ ಹೇಳಿಕೆಗೆ ಪ್ರತಿಯಾಗಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಸೋನಿಯಾ ಗಾಂಧಿ ಅವರಿಗೆ ವಿಷಕನ್ಯೆ ಎಂದು ಸಂಬೋಧಿಸಿದ್ದಾರೆ.
ಯತ್ನಾಳ್ ಬದಲು ಪ್ರಧಾನಿ ಕ್ಷಮೆ ಕೇಳಬೇಕು ಎಂದು ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವಕುಮಾರ್ ಆಗ್ರಹಿಸಿದ್ದಾರೆ. ಆದರೆ, ಇದು ಯತ್ನಾಳ್ ಅವರ ವೈಯಕ್ತಿಕ ಹೇಳಿಕೆಯಾಗಿದೆ. ಇದು ಪಕ್ಷದ ಹೇಳಿಕೆಯಲ್ಲ. ಮೋದಿ ವಿರುದ್ಧ ಎಐಸಿಸಿ ಅಧ್ಯಕ್ಷರು ಹೇಳಿಕೆ ನೀಡಿದ್ದಾರೆ. ಹಾಗಾಗಿ ಅದು ಕಾಂಗ್ರೆಸ್ ಪಕ್ಷದ ಹೇಳಿಕೆಯಾಗಲಿದೆ. ಆದರೆ, ಯತ್ನಾಳ್ ಹೇಳಿಕೆ ಪಕ್ಷದ ಹೇಳಿಕೆಯಾಗಲ್ಲ. ಹಾಗಾಗಿ ಪ್ರಧಾನಿ ಮೋದಿ ಕ್ಷಮೆ ಕೇಳುವ ಪ್ರಶ್ನೆಯೇ ಉದ್ಭವವಾಗಲ್ಲ ಎಂದರು. ಯತ್ನಾಳ್ ಹೇಳಿಕೆಯನ್ನು ಬಿಜೆಪಿ ಒಪ್ಪಲ್ಲ. ಯಾರೂ ಕೂಡ ಇಂತಹ ಹೇಳಿಕೆ ನೀಡಬಾರದು.
ಯಾರೇ ಇಂತಹ ಹೇಳಿಕೆ ನೀಡಿದರೂ ಅದನ್ನು ನಮ್ಮ ಪಕ್ಷ ಕೂಡ ಒಪ್ಪಲ್ಲ ಎಂದರು. ಮೋದಿ ಬಗ್ಗೆ ಖರ್ಗೆ ವಿಷ ಸರ್ಪಕ್ಕೆ ಹೋಲಿಸಿದ ವಿಚಾರದ ಕುರಿತು ಪ್ರತಿಕ್ರಿಯೆ ನೀಡಿದ ಸಚಿವ ಅಶ್ವತ್ಥ ನಾರಾಯಣ್, ಕಾಂಗ್ರೆಸ್ ಪಕ್ಷದ ಸೋನಿಯಾ ಗಾಂಧಿ ಹಾಗೂ ಇತರ ನಾಯಕರು ಯಾವಾಗೆಲ್ಲಾ ಮೋದಿ ವಿರುದ್ಧ ಇಂತಹ ಹೇಳಿಕೆ ನೀಡಿದ್ದರೋ ಆಗೆಲ್ಲಾ ಕಾಂಗ್ರೆಸ್ ಪಕ್ಷ ಸಂಪೂರ್ಣ ಧೂಳಿಪಟ ಆಗಿದೆ. ಈಗ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ನೀಡಿರುವ ಹೇಳಿಕೆ ಖಂಡನೀಯ. ಅವರ ಹೇಳಿಕೆಯನ್ನು ಬಿಜೆಪಿ ಸಂಪೂರ್ಣವಾಗಿ ಖಂಡಿಸಲಿದೆ ಎಂದು ಹೇಳಿದ್ದಾರೆ.