ಹುಬ್ಬಳ್ಳಿ: ಮಾಜಿ ಮುಖ್ಯಮಂತ್ರಿ ಜಗದೀಶ ಶೆಟ್ಟರ್ ಬಿಜೆಪಿ ತೊರೆದ ಬೆನ್ನಲ್ಲೇ ಇದೀಗ ಅವರನ್ನು ಬೆಂಬಲಿಸಿರುವ 27 ಮುಖಂಡರನ್ನು ಪಕ್ಷ ಉಚ್ಛಾಟಿಸಿದೆ. ಆದರೆ ಪಕ್ಷಕ್ಕೆ ರಾಜೀನಾಮೆ ನೀಡಿರುವ ಕೆಲವರನ್ನೂ ಉಚ್ಛಾಟಿಸಲಾಗಿದೆ.
ಹುಬ್ಬಳ್ಳಿ-ಧಾರವಾಡ ಸೆಂಟ್ರಲ್ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಜಗದೀಶ ಶೆಟ್ಟರ್ ಅವರ ಜೊತೆಗೆ ಗುರುತಿಸಿಕೊಂಡ ಹಿನ್ನೆಲೆ ಮತ್ತು ಬಿಜೆಪಿಯಲ್ಲೇ ಇದ್ದುಕೊಂಡು ಪಕ್ಷದ ಅಭ್ಯರ್ಥಿ ಮಹೇಶ ಟೆಂಗಿನಕಾಯಿ ಅವರನ್ನು ಬೆಂಬಲಿಸದ ಕಾರಣ ಮುಖಂಡರು ಪಕ್ಷ ವಿರೋಧಿ ಚಟುವಟಿಕೆಯಲ್ಲಿ ತೊಡಗಿದ್ದರು ಎಂದು ನಿಗಮ ಮಂಡಳಿ ಮಾಜಿ ಅಧ್ಯಕ್ಷರಾದ ಮಲ್ಲಿಕಾರ್ಜುನ ಸಾವಕಾರ, ನಾಗೇಶ ಕಲಬುರ್ಗಿ (ಉಚ್ಚಾಟನೆಗೂ ಮೊದಲೇ ರಾಜೀನಾಮೆ ಕೊಟ್ಟಿದ್ದರು),
ಪಾಲಿಕೆಯ ಮಾಜಿ ಸದಸ್ಯ ಮಹೇಶ ಬುರ್ಲಿ, ಶಂಕರ ಸುಂಕದ, ಮಂಜು ದಲಭಂಜನ, ವಿರೂಪಾಕ್ಷಿ ರಾಯನಗೌಡ ಸೇರಿದಂತೆ ಸದಸ್ಯರು, ಪಕ್ಷದ ಪದಾಧಿಕಾರಿಗಳು ಹಾಗೂ ನಿಗಮ ಮಂಡಳಿಗಳ ಮಾಜಿ ಅಧ್ಯಕ್ಷರು ಸೇರಿ 27 ಜನರನ್ನು ಆರು ವರ್ಷಗಳ ಕಾಲ ಪಕ್ಷದಿಂದ ಉಚ್ಚಾಟಿಸಲಾಗಿದೆ ಎಂದು ಜಿಲ್ಲಾಧ್ಯಕ್ಷ ಸಂಜಯ ಕಪಟಕರ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.