ಬೀದರ್: ದೇಶದಲ್ಲೇ ಕರ್ನಾಟಕ ನಂಬರ್ 1 ಆಗಲು ಡಬಲ್ ಎಂಜಿನ್ ಸರ್ಕಾರ ಬರಬೇಕು ಎಂದು ರಾಜ್ಯದ ಜನತೆಗೆ ಪ್ರಧಾನಿ ನರೇಂದ್ರ ಮೋದಿ ಕರೆ ನೀಡಿದರು. ಈ ಬಾರಿಯ ನಿರ್ಧಾರ, ಬಹುಮತದ ಬಿಜೆಪಿ ಸರ್ಕಾರ ಎಂದು ಕನ್ನಡದಲ್ಲೇ ಘೋಷಿಸುವ ಮೂಲಕ ಮೋದಿ ಗಮನ ಸೆಳೆದರು.
ಕರ್ನಾಟಕ ವಿಧಾನಸಭಾ ಚುನಾವಣೆ ಹಿನ್ನೆಲೆಯಲ್ಲಿ ಬೀದರ್ನಲ್ಲಿ ಪ್ರಚಾರ ಸಮಾರಂಭದಲ್ಲಿ ಪಾಲ್ಗೊಂಡು ನರೇಂದ್ರ ಮೋದಿ ಮಾತನಾಡಿದರು. “ಜಗದ್ಗುರು ಬಸವೇಶ್ವರ ಮತ್ತು ಶಿವಶರಣರ ಭೂಮಿಗೆ ನನ್ನ ನಮಸ್ಕಾರಗಳು” ಎಂದು ಕನ್ನಡದಲ್ಲೇ ಮೋದಿ ಭಾಷಣ ಆರಂಭಿಸಿದರು.
ಬಸವೇಶ್ವರ ಅವರ ಆಶೀರ್ವಾದ ನಿಮ್ಮ ಕೆಲಸ ಮಾಡಲು ಶಕ್ತಿ ಕೊಡುತ್ತದೆ. ಕರ್ನಾಟಕದ ಕೀರಿಟ ಬೀದರ್ನಲ್ಲಿ ಮೊದಲ ಬಾರಿ ಪ್ರಧಾನಿಯಾದ ವೇಳೆ ಆಶೀರ್ವಾದ ಸಿಕ್ಕಿತ್ತು. ಅಂದಿನಿಂದ ಸಂಬಂಧ ಮುಂದುವರಿದಿದೆ. ದೊಡ್ಡ ಸಂಖ್ಯೆಯಲ್ಲಿ ಬಂದು ದೇಶಕ್ಕೆ ನೀವು ಸಂದೇಶ ನೀಡುತ್ತಿದ್ದೀರಾ. ಕರ್ನಾಟಕದಲ್ಲಿ ಬಹುಮತ ಬಿಜೆಪಿ ಸರ್ಕಾರದ ಬರಲಿದೆ ಎಂದು ಸಂದೇಶ ನೀಡಿದ್ದೀರಾ. ಇದು ಸರ್ಕಾರ ಮಾಡುವ ಚುನಾವಣೆ ಮಾತ್ರವಲ್ಲ. ದೇಶದಲ್ಲಿ ಕರ್ನಾಟಕವನ್ನು ನಂಬರ್ ಒನ್ ಮಾಡುವ ಚುನಾವಣೆ. ಭಾರತದ ಅಭಿವೃದ್ಧಿಯ ಚುನಾವಣೆ ಎಂದು ತಿಳಿಸಿದರು.
ಭಾರತದ ಅಭಿವೃದ್ಧಿಯಾದರೆ ದೇಶದ ಎಲ್ಲ ಕೋಣೆ ಕೋಣೆಯೂ ಅಭಿವೃದ್ಧಿಯಾಗಲಿದೆ. ರಾಜ್ಯದಲ್ಲಿ ಸಾಕಷ್ಟು ಅವಕಾಶಗಳು ಸೃಷ್ಟಿಯಾಗಲಿದೆ. ಕರ್ನಾಟಕದ ಜನರು ಕನಸಗಳಿಂದ ದೂರ ಸರಿಯಬಾರದು. ಕಳೆದ ಐದು ವರ್ಷದಿಂದ ನಡೆಯುತ್ತಿರುವ ಅಭಿವೃದ್ಧಿ ನಿಲ್ಲಬಾರದು. ಅಭಿವೃದ್ಧಿ ಮುಂದುವರಿಯಲು ಬಿಜೆಪಿಗೆ ಅಧಿಕಾರ ನೀಡಬೇಕು. ದೇಶದಲ್ಲಿ ಕರ್ನಾಟಕ ನಂಬರ್ ಒನ್ ಆಗಲು ಡಬಲ್ ಎಂಜಿನ್ ಸರ್ಕಾರದ ಅಗತ್ಯ ಇದೆ. ರಾಜ್ಯ ಹಾಗೂ ಕೇಂದ್ರ ಬಿಜೆಪಿ ಸರ್ಕಾರದಿಂದ ಕರ್ನಾಟಕ ನಂಬರ್ ಒನ್ ಆಗಲಿದೆ ಎಂದು ಹೇಳಿದರು.
ಕರ್ನಾಟಕದಲ್ಲಿ ಗಣನೀಯ ಪ್ರಮಾಣದ ವಿದೇಶಿ ಹೂಡಿಕೆಯಾಗಿದೆ. ಕಾಂಗ್ರೆಸ್ ಅವಧಿಯಲ್ಲಿ 30,000 ಕೋಟಿ ಹೂಡಿಕೆ ಬರುತ್ತಿತ್ತು. ಈಗ 90,000 ಕೋಟಿ ಹೂಡಿಕೆ ಬರುತ್ತಿದೆ. ಮೂರಕ್ಕೂ ಅಧಿಕ ಪಟ್ಟು ಹೂಡಿಕೆ ಕರ್ನಾಟಕಕ್ಕೆ ಬರ್ತಿದೆ. ಕೊರೊನಾ, ಯುದ್ಧದ ನಡುವೆ ನಾವು ಈ ಪ್ರಮಾಣದ ಹೂಡಿಕೆ ತಂದಿದ್ದೇವೆ. ಡಬಲ್ ಎಂಜಿನ್ ಸರ್ಕಾರದಿಂದ ಡಬಲ್ ಸ್ಪೀಡ್ ಇರಲಿದೆ. ಕಾಂಗ್ರೆಸ್ ಸರ್ಕಾರದ ಸಾಕಷ್ಟು ಯೋಜನೆಗಳು ಧೂಳು ತಿನ್ನುತ್ತಿದೆ. ಬಹಳಷ್ಟು ಯೋಜನೆಗಳನ್ನು ನಾವು ಮಾಡಿದ್ದೇವೆ. ಅದರಲ್ಲಿ ಹಲವು ಯೋಜನೆ ಕರ್ನಾಟಕದವು ಇದೆ ಎಂದಿದ್ದಾರೆ.
ಬೀದರ್ನ ಯೋಜನೆಗಳೂ ಇವೆ. ಕಿಸಾನ್ ಸಮ್ಮಾನ್ ನಿಧಿಯಿಂದ ರೈತರಿಗೆ ಸಾಕಷ್ಟು ಲಾಭವಾಗಿದೆ. ಅಲ್ಲಿ ಇಲ್ಲಿ ಓಡಾಡುವ ಅವಶ್ಯಕತೆ ಇಲ್ಲ. ಕೃಷಿ ಸಮ್ಮಾನ್ ಯೋಜನೆ ಶುರು ಮಾಡಿದಾಗ ಕಾಂಗ್ರೆಸ್ ಜೆಡಿಎಸ್ ಸರ್ಕಾರ ಇತ್ತು. ಅವರು ರೈತರ ಮಾಹಿತಿ ನೀಡುತ್ತಿರಲಿಲ್ಲ. ಕಾಂಗ್ರೆಸ್ಗೆ ರೈತರ ಮೇಲೆ ಎಷ್ಟು ದ್ವೇಷ ಇದೆ ಎಂದು ಕಿಡಿಕಾರಿದರು.