ಮಡಿಕೇರಿ: ಕೊಡಗು ಜಿಲ್ಲೆಯಲ್ಲಿ ಬಿಜೆಪಿ ಅಭ್ಯರ್ಥಿ ಪರವಾಗಿ ನಡೆಸುತ್ತಿದ್ದ ರೋಡ್ ಶೋವನ್ನು ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಅರ್ಧಕ್ಕೆ ಮೊಟಕುಗೊಳಿಸಿ ಉಡುಪಿ ಜಿಲ್ಲೆಯ ಕಾಪುಗೆ ಹೊರಟ ಘಟನೆ ನಡೆದಿದೆ.
ಜಿಲ್ಲೆಯ ವಿವಿಧೆಡೆಯಿಂದ ಆಗಮಿಸಿದ್ದ ಸಾವಿರಾರು ಬಿಜೆಪಿ ಕಾರ್ಯಕರ್ತರು ಶನಿವಾರ ಬೆಳಗ್ಗೆಯಿಂದ ಅಮಿತ್ ಶಾ ಅವರ ಬರುವಿಕೆಗಾಗಿ ಉತ್ಸಾಹದಿಂದ ಕಾಯುತ್ತಿದ್ದರು. ಆದರೆ ಅಮಿತ್ ಶಾ (Amit Shah) ರೋಡ್ ಶೋವನ್ನು ಅರ್ಧಕ್ಕೆ ಮೊಟಕು ಗೊಳಿಸಿ ದಿಢೀರ್ ಎಂದು ತೆರಳಿರುವುದು ಬಿಜೆಪಿ (BJP) ಕಾರ್ಯಕರ್ತರಲ್ಲಿ ನಿರಾಶೆ ಉಂಟಾಗಿದೆ.
ಮಡಿಕೇರಿ ಹಾಗೂ ವಿರಾಜಪೇಟೆ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಅಪ್ಪಚ್ಚು ರಂಜನ್ ಹಾಗೂ ಕೆ.ಜಿ ಬೋಪಯ್ಯ ಅವರ ಪರವಾಗಿ ಚುನಾವಣಾ ಚಾಣಕ್ಯ ಜಿಲ್ಲೆಗೆ ಬಂದು ಒಂದಷ್ಟು ಕಮಾಲ್ ಮಾಡುತ್ತಾರೆ. ಈ ಬಾರಿಯು ಬಿಜೆಪಿ ಪಕ್ಷದ ಅಭ್ಯರ್ಥಿಗಳು ಗೆಲುವು ಸಾಧಿಸುತ್ತಾರೆ ಎಂದು ಸಾವಿರಾರು ಬಿಜೆಪಿ ಕಾರ್ಯಕರ್ತರು ಕಾದಿದ್ದರು.
ಅಲ್ಲದೇ ತಮ್ಮ ಕ್ಷೇತ್ರಗಳ ಅಭ್ಯರ್ಥಿ ಪರವಾಗಿ ಬಹಿರಂಗ ಪ್ರಚಾರ ಮಾಡುತ್ತಾರೆ ಎಂಬ ನೀರಿಕ್ಷೆ ಮಾಡಿದ್ದ ಕಾರ್ಯಕರ್ತರಿಗೆ ಅರ್ಧಕ್ಕೆ ರೋಡ್ ಶೋ ಮುಗಿಸಿ ಹೊರಟ ಅಮಿತ್ ಶಾ ಅವರ ನಡೆಯಿಂದ ನಿರಾಶೆ ಉಂಟಾಗಿದೆ. ಅಮಿತ್ ಶಾ ಅವರೊಂದಿಗೆ ಸಂಸದ ಪ್ರತಾಪ್ ಸಿಂಹ, ಬಿಜೆಪಿ ರಾಜ್ಯ ಅಧ್ಯಕ್ಷ ನಳಿನ್ ಕುಮಾರ್ ಕಟೀಲ್ ಅವರು ರೋಡ್ ಶೋದಲ್ಲಿ ಅಮಿತ್ ಶಾ ಅವರಿಗೆ ಸಾಥ್ ನೀಡಿದರು.