ಬೀದರ್ : ಬೆಳ್ಳಂಬೆಳಗ್ಗೆ ಆರಂಭವಾದ ಜಿನಿ ಜಿನಿ ಮಳೆಯ ನಡುವೆಯೂ ಮಾಜಿ ಸಚಿವರು, ಜೆಡಿಎಸ್ ಶಾಸಕಾಂಗ ಪಕ್ಷದ ಉಪನಾಯಕರು, ಜೆಡಿಎಸ್ ಕೋರ್ ಕಮಿಟಿಯ ಅಧ್ಯಕ್ಷರು, ಬೀದರ್ ದಕ್ಷಿಣ ಕ್ಷೇತ್ರದ ಶಾಸಕರು, ಜೆಡಿಎಸ್ ಪಕ್ಷದ ಅಭ್ಯರ್ಥಿಯಾಗಿರುವ ಬಂಡೆಪ್ಪ ಖಾಶೆಂಪುರ್ ರವರು ಕ್ಷೇತ್ರದ ನೀಡವಂಚಾ, ಬಂಬಳಗಿ, ರೇಕುಳಗಿ, ಹುಚ್ಚುಕನಳ್ಳಿ, ಖೇಣಿ ರಂಜೋಳ ಕ್ರಾಸ್, ಸಿರಕಟ್ಟನಳ್ಳಿ, ಮಂಗಲಗಿ ವಾಡಿ ಸೇರಿದಂತೆ ವಿವಿಧ ಗ್ರಾಮಗಳಲ್ಲಿ ಅಬ್ಬರದ ಪ್ರಚಾರ ನಡೆಸಿದರು.
ಬೆಳ್ಳಂಬೆಳಗ್ಗೆ ಆರಂಭವಾದ ಜಿಟಿಜಿಟಿ ಮಳೆಯ ನಡುವೆಯೇ ನೀಡವಂಚಾ ಗ್ರಾಮಕ್ಕೆ ಭೇಟಿ ನೀಡಿದ ಶಾಸಕ ಬಂಡೆಪ್ಪ ಖಾಶೆಂಪುರ್ ರವರು, ಗ್ರಾಮ ಸಂಚಾರ ನಡೆಸಿ ಮನೆಮನೆಗೂ ಭೇಟಿ ನೀಡಿ ಅಬ್ಬರದ ಪ್ರಚಾರದೊಂದಿಗೆ ಮತಯಾಚನೆ ಯಾತ್ರೆ (ಚುನಾವಣಾ ಪ್ರಚಾರ) ನಡೆಸಿ, ಜೆಡಿಎಸ್ ಪಕ್ಷಕ್ಕೆ ಮತ ನೀಡುವಂತೆ ಮನವಿ ಮಾಡಿದರು. ಶಾಸಕ ಬಂಡೆಪ್ಪ ಖಾಶೆಂಪುರ್ ರವರನ್ನು ಗ್ರಾಮಸ್ಥರು ಬಾಜಾ ಭಜಂತ್ರಿಯೊಂದಿಗೆ ಅದ್ದೂರಿಯಾಗಿ ಸ್ವಾಗತಿಸಿದರು.
ನೀಡವಂಚಾ ಪ್ರಚಾರದ ನಡುವೆಯೇ ವರುಣ ದೇವ ವಿರಾಮ ಘೋಷಿಸಿದನು. ಬಳಿಕ ಶಾಸಕ ಬಂಡೆಪ್ಪ ಖಾಶೆಂಪುರ್ ರವರು, ಕ್ಷೇತ್ರದ ಬಂಬಳಗಿ, ರೇಕುಳಗಿ, ಹುಚ್ಚುಕನಳ್ಳಿ, ಖೇಣಿ ರಂಜೋಳ ಕ್ರಾಸ್, ಸಿರಕಟ್ಟನಳ್ಳಿ, ಮಂಗಲಗಿ ವಾಡಿ ಸೇರಿದಂತೆ ವಿವಿಧ ಗ್ರಾಮಗಳಲ್ಲಿ ಅಬ್ಬರದ ಪ್ರಚಾರ ನಡೆಸಿ, ದೇವಸ್ಥಾನ, ದರ್ಗಾ, ಚರ್ಚ್ ಗಳಿಗೆ ಭೇಟಿ ನೀಡಿ ಪೂಜೆ, ಪ್ರಾರ್ಥನೆ ಸಲ್ಲಿಸಿದರು. ಗ್ರಾಮಗಳಲ್ಲಿನ ಮಹಾತ್ಮರ ಪುತ್ಥಳಿ, ಪ್ರತಿಮೆ, ಪೋಟೋಗಳಿಗೆ ಮಾಲಾರ್ಪಣೆ ಮಾಡಿದರು.
ವಿವಿಧೆಡೆ ಜೆಡಿಎಸ್ ಸೇರಿದ ಪ್ರಮುಖರು:
ಚುನಾವಣಾ ಪ್ರಚಾರದ ನಡುವೆಯೇ ಕ್ಷೇತ್ರದ ನೀಡವಂಚಾ, ಸಿರಕಟ್ಟನಳ್ಳಿ ಸೇರಿದಂತೆ ವಿವಿಧೆಡೆ ಗ್ರಾಮ ಪಂಚಾಯತಿ ಸದಸ್ಯರು ಹಾಗೂ ವಿವಿಧ ಪಕ್ಷಗಳ ಪ್ರಮುಖರು, ನೂರಾರು ಜನ ಯುವಕರು ಜೆಡಿಎಸ್ ಪಕ್ಷಕ್ಕೆ ಸೇರ್ಪಡೆಯಾದರು. ಶಾಸಕ ಬಂಡೆಪ್ಪ ಖಾಶೆಂಪುರ್ ರವರು ಜೆಡಿಎಸ್ ಶಾಲು ಹೊದಿಸಿ ಪಕ್ಷಕ್ಕೆ ಬರಮಾಡಿಕೊಂಡರು. ಮತಯಾಚನಾ ಯಾತ್ರೆಯುದ್ದಕ್ಕೂ ಬಾಜಾ ಭಜಂತ್ರಿ, ಪಟಾಕಿಗಳು ಸದ್ದು ಮಾಡಿದರೆ. ಇನ್ನೊಂದೆಡೆ ಪಕ್ಷದ ಮುಖಂಡರು, ಕಾರ್ಯಕರ್ತರು, ಅಭಿಮಾನಿಗಳು ಹರ್ಷೋದ್ಗಾರ ಮೊಳಗಿಸಿದರು.