ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ನಡೆಸಿಕೊಡುವ ಮನ್ ಕಿ ಬಾತ್ ಕಾರ್ಯಕ್ರಮಕ್ಕೆ ನೂರನೇ ಸಂಚಿಕೆ ಸಂಭ್ರಮ. ದೇಶದ ಜನರೊಂದಿಗೆ ಸಂಪರ್ಕ ಸಾಧಿಸಲು ಮೋದಿ ಆಯ್ದುಕೊಂಡ ಈ ಕಾರ್ಯಕ್ರಮ ಎಲ್ಲರ ಮೆಚ್ಚುಗೆಗೆ ಪಾತ್ರವಾಗಿದ್ದು ಪ್ರತಿಯೊಬ್ಬರು ಕಾರ್ಯಕ್ರಮವನ್ನು ಮೆಚ್ಚಿಕೊಂಡಿದ್ದಾರೆ.
2014 ರಲ್ಲಿ ಆರಂಭವಾದ ಕಾರ್ಯಕ್ರಮ ಇಂದಿಗೆ 100ನೇ ಕಂತನ್ನು ಪೂರೈಸಲಿದೆ. ಪ್ರಧಾನಿ ಮೋದಿ ಅವರ ನೂರನೇ ಮಾಸಿಕ ರೇಡಿಯೋ ಭಾಷಣವನ್ನು ದೇಶಾದ್ಯಂತ ಕೇಳುವುದರ ಜೊತೆಗೆ ವಿಶ್ವಸಂಸ್ಥೆಯ ಪ್ರಧಾನ ಕಚೇರಿಯಲ್ಲಿಯೂ ಮೋದಿ ಭಾಷಣ ಪ್ರಸಾರವಾಗಲಿದೆ.
ಇಂದು 11 ಗಂಟೆಗೆ ಪ್ರಸಾರವಾಗಲಿರುವ ಮನ್ ಕಿ ಬಾತ್ ಕಾರ್ಯಕ್ರಮದ ಯಶಸ್ಸಿಯಾಗಿ ಬಿಜೆಪಿ ಭರ್ಜರಿ ಸಿದ್ಧತೆ ಮಾಡಿಕೊಂಡಿದೆ. 4 ಲಕ್ಷ ಕಡೆಗಳಲ್ಲಿ ಜನರು ಕೇಳುವಂತೆ ಮಾಡುತ್ತಿದೆ. ಅಲ್ಲದೇ, ವಿಶ್ವಸಂಸ್ಥೆಯಲ್ಲೂ ಇದರ ನೇರಪ್ರಸಾರವಾಗಲಿದೆ.
ಅಕ್ಟೋಬರ್ 3, 2104 ರಂದು ಪ್ರಾರಂಭವಾದ ಈ ಕಾರ್ಯಕ್ರಮವು ಮಹಿಳೆಯರು, ಯುವಕರು ಮತ್ತು ರೈತರು ಸೇರಿದಂತೆ ಎಲ್ಲ ಸಾಮಾಜಿಕ ವರ್ಗಗಳನ್ನು ಒಳಗೊಂಡಿದೆ. ಇದು 22 ಭಾರತೀಯ ಭಾಷೆಗಳಲ್ಲಿ ಮಾತ್ರವಲ್ಲದೇ, ಫ್ರೆಂಚ್, ಚೈನೀಸ್, ಇಂಡೋನೇಷಿಯನ್, ಟಿಬೆಟಿಯನ್, ಬರ್ಮೀಸ್, ಬಲೂಚಿ, ಅರೇಬಿಕ್, ಪಶ್ತು, ಪರ್ಷಿಯನ್, ದರಿ ಮತ್ತು ಸ್ವಾಹಿಲಿ ಸೇರಿದಂತೆ 11 ವಿದೇಶಿ ಭಾಷೆಗಳಲ್ಲಿ ಪ್ರಸಾರವಾಗುತ್ತದೆ.
100 ಕೋಟಿಗೂ ಹೆಚ್ಚು ಜನರು ಒಮ್ಮೆಯಾದರೂ ಮನ್ ಕಿ ಬಾತ್ ಕಾರ್ಯಕ್ರಮದ ಶ್ರೋತೃಗಳಾಗಿದ್ದಾರೆ. ನೇರವಾಗಿ ಜನರೊಂದಿಗೆ ಮಾತನಾಡುವ, ತಳಮಟ್ಟದ ಬದಲಾವಣೆ, ಜನರ ಸಾಧನೆಗಳನ್ನು ಕಾರ್ಯಕ್ರಮ ಪರಿಚಯಿಸುತ್ತದೆ. ಮನ್ ಕಿ ಬಾತ್ನಲ್ಲಿ ಪ್ರಮುಖವಾಗಿ ಸ್ವಚ್ಛತೆ ಮತ್ತು ನೈರ್ಮಲ್ಯ, ಆರೋಗ್ಯ, ಸೌಖ್ಯ, ನೀರಿನ ಸಂರಕ್ಷಣೆ ಮತ್ತು ಸುಸ್ಥಿರತೆಗೆ ಸಂಬಂಧಿಸಿದ ಐದು ಪ್ರಮುಖ ವಿಷಯಗಳನ್ನು ಗುರುತಿಸಲಾಗಿದೆ.
ಈ ಕಾರ್ಯಕ್ರಮವನ್ನು ದೂರದರ್ಶನ ದೇಶಾದ್ಯಂತ ರಾಜಭವನಗಳಲ್ಲಿ ನೇರ ಪ್ರಸಾರ ಮಾಡಲಿದೆ. ಮುಂಬೈನಲ್ಲಿರುವ ರಾಜಭವನವು ಅಲ್ಲಿನ ನಾಗರಿಕರು ಭಾಗವಹಿಸಲು ಅವಕಾಶ ಮಾಡಿಕೊಟ್ಟಿದೆ. ನಿನ್ನೆ ನಡೆದ ಕಾರ್ಯಕ್ರಮದಲ್ಲಿ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು, ಮನ್ ಕಿ ಬಾತ್ ಒಂದು ವಿಶಿಷ್ಟ ಪ್ರಯೋಗವಾಗಿದ್ದು, ಅದು ದೇಶದಲ್ಲಿ ಪ್ರಜಾಪ್ರಭುತ್ವದ ಅಡಿಪಾಯವನ್ನು ಬಲಪಡಿಸಿದೆ ಎಂದು ಹೊಗಳಿದ್ದರು.