ಇತ್ತೀಚೆಗೆ ಐಶ್ವರ್ಯಾ ರೈ ಬಚ್ಚನ್ ನಟನೆಯ, ಮಣಿರತ್ನಂ ನಿರ್ದೇಶನದ ಪೊನ್ನಿಯನ್ ಸೆಲ್ವನ್ 2 ಸಿನಿಮಾ ತೆರೆ ಕಂಡಿದ್ದು ಸೂಪರ್ ಹಿಟ್ ಆಗಿದೆ. ಐಶ್ವರ್ಯ ನಟನೆಯನ್ನು ಪ್ರತಿಯೊಬ್ಬರು ಮೆಚ್ಚಿಕೊಂಡಿದ್ದು ಈ ಬಗ್ಗೆ ಸ್ವತಃ ನಟ ಅಭಿಷೇಕ್ ಬಚ್ಚನ್ ಕೂಡ ಟ್ವೀಟ್ ಮೂಲಕ ಖುಷಿ ಹಂಚಿಕೊಂಡಿದ್ದಾರೆ. ಈ ವೇಳೆ ಅಭಿಷೇಕ್ ಟ್ವೀಟ್ ಗೆ ಅಭಿಮಾನಿಯೊಬ್ಬರು ಪ್ರಶ್ನಿಸಿದ್ದು ಅಭಿಮಾನಿಯ ಪ್ರಶ್ನೆಗೆ ಅಭಿಷೇಕ್ ಬಚ್ಚನ್ ನೀಡಿರುವ ಪ್ರತಿಕ್ರಿಯೆ ಪ್ರತಿಯೊಬ್ಬರ ಮೆಚ್ಚುಗೆಗೆ ಪಾತ್ರವಾಗಿದೆ.
ಟ್ವೀಟರ್ ನಲ್ಲಿ ಸಕ್ರಿಯರಾಗಿರುವ ಅಭಿಷೇಕ್ ಬಚ್ಚನ್ ಗೆ ಅಭಿಮಾನಿಗಳು ಹಲವು ಭಾರಿ ನೇರವಾಗಿ ಪ್ರಶ್ನೆಗಳನ್ನು ಮಾಡಿದ್ದಾರೆ. ಈಗ ಅಭಿಷೇಕ್ ಬಚ್ಚನ್ ಅವರಿಗೆ ಹಾಗೆಯೇ ಆಗಿದೆ. ‘ಐಶ್ವರ್ಯಾ ರೈ ಅವರಿಗೆ ಹೆಚ್ಚು ಸಿನಿಮಾ ಒಪ್ಪಿಕೊಳ್ಳಲು ಬಿಡಿ. ಮಗಳು ಆರಾಧ್ಯಾಳನ್ನು ನೀವು ನೋಡಿಕೊಳ್ಳಿ’ ಎಂದು ಅಭಿಮಾನಿಯೊಬ್ಬರು ಸಲಹೆ ನೀಡಿದ್ದಾರೆ.
ಇದಕ್ಕೆ ಪ್ರತಿಕ್ರಿಯಿಸಿರುವ ಅಭಿಷೇಕ್ ಬಚ್ಚನ್, ‘ಐಶ್ವರ್ಯಾಗೆ ಹೆಚ್ಚು ಸಿನಿಮಾ ಒಪ್ಪಿಕೊಳ್ಳಲು ಬಿಡಬೇಕಾ? ಸರ್.. ಯಾವುದಕ್ಕೂ ಅವರು ನನ್ನ ಅನುಮತಿ ಪಡೆಯುವ ಅಗತ್ಯವಿಲ್ಲ. ಅದರಲ್ಲೂ ಅವರು ಇಷ್ಟಪಡುವ ವಿಚಾರದಲ್ಲಿ ನನ್ನ ಅನುಮತಿಯ ಅವಶ್ಯಕತೆ ಇಲ್ಲ’ ಎಂದಿದ್ದಾರೆ.