ಮಂಡ್ಯ: ಎರಡು ರಾಷ್ಟ್ರೀಯ ಪಕ್ಷಗಳ ನಾಯಕರು ರಾಜ್ಯದಲ್ಲಿ ದಾಳಿ ನಡೆಸುತ್ತಿದ್ದಾರೆ. ಬಿಜೆಪಿಯಲ್ಲಿ (BJP) ಪ್ರಧಾನಿ ಸೇರಿದಂತೆ ಕೇಂದ್ರದ ಮಂತ್ರಿಗಳು ಇಲ್ಲಿಯೇ ಠಿಕಾಣಿ ಹೂಡಿದ್ದಾರೆ ಎಂದು ಮಾಜಿ ಮುಖ್ಯಮಂತ್ರಿ ಹೆಚ್.ಡಿ ಕುಮಾರಸ್ವಾಮಿ (H.D.Kumaraswamy) ವಾಗ್ದಾಳಿ ನಡೆಸಿದ್ದಾರೆ. ಆದಿಚುಂಚನಗಿರಿಯಲ್ಲಿ (Adichunchanagiri) ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಾಂಗ್ರೆಸ್ನ ನಾಯಕರು ಕೂಡ ಇಲ್ಲಿಯೇ ಇದ್ದಾರೆ. ಆದರೆ ಕರ್ನಾಟಕದ ದುರಾದೃಷ್ಟವೇನೆಂದರೆ ಇಲ್ಲಿನ ಸಮಸ್ಯೆಗಳ ಬಗ್ಗೆ ಇಬ್ಬರೂ ಹೇಳುತ್ತಿಲ್ಲ. ಪ್ರಧಾನ ಮಂತ್ರಿಗಳು ಕೇವಲ ಅವರನ್ನು ನಿಂದಿಸಿದ ಬಗ್ಗೆ ಹೇಳುತ್ತಾರೆ. ಕಾಂಗ್ರೆಸ್ನವರು (Congress) ಅವರನ್ನು ವಿಷಸರ್ಪ ಎಂದು ಮಾತನಾಡುತ್ತಿದ್ದಾರೆ.
ರಾಜ್ಯದ ಸಮಸ್ಯೆಗಳ ಬಗ್ಗೆ ಹಾಗೂ ಕೇಂದ್ರ ಸರ್ಕಾರದ ಯೋಜನೆಗಳ ಬಗ್ಗೆ ಯಾರೂ ಮಾತನಾಡುತ್ತಿಲ್ಲ. ಬೆಳಗಾವಿಯ (Belagavi) ಗಡಿ ವಿಚಾರದ ಬಗ್ಗೆ ಮೌನವಹಿಸಿದ್ದಾರೆ ಎಂದು ಕಿಡಿಕಾರಿದರು. ನಾಡಿನ ಜನರ ಬದುಕಿನ ಬಗ್ಗೆ ಎರಡೂ ಪಕ್ಷಗಳು ಸಂದೇಶ ನೀಡುತ್ತಿಲ್ಲ. ಕಾಂಗ್ರೆಸ್ ಎರಡು ಸಾವಿರ ಗ್ಯಾರಂಟಿ ಸೇರಿ ಇನ್ನೂ ನಾಲ್ಕು ಭರವಸೆಯನ್ನು ಬೇರೆ ರಾಜ್ಯದಲ್ಲಿ ಘೋಷಣೆ ಮಾಡಿಲ್ಲ ಎಂದು ಬಿಜೆಪಿ ಹೇಳುತ್ತಿದೆ. ಎರಡೂ ರಾಷ್ಟ್ರೀಯ ಪಕ್ಷಗಳಿಂದ ನಾಡಿನ ಜನರ ಸಮಸ್ಯೆಗಳಿಗೆ ಪರಿಹಾರ ಇಲ್ಲ. ನಾಡಿನ ಸಮಸ್ಯೆಗಳಿಗೆ ಜೆಡಿಎಸ್ (JDS) ಪರಿಹಾರ ನೀಡುತ್ತದೆ. ನಮ್ಮ ಯೋಜನೆಯನ್ನು ಜನರು ಮೆಚ್ಚಿದ್ದಾರೆ ಎಂದರು.
ಅಶೋಕ್ (R.Ashok) ಅವರು ಜೆಡಿಎಸ್ ಲಾಟರಿ ನಿರೀಕ್ಷೆ ಮಾಡುತ್ತಿದೆ ಎಂದು ಹೇಳಿದ್ದರು. ನಾವು ಯಾವುದೇ ಲಾಟರಿಯನ್ನು ನಿರೀಕ್ಷೆ ಮಾಡುತ್ತಿಲ್ಲ. ಜೆಡಿಎಸ್ಗೆ 20 ಸೀಟ್ ಬರುತ್ತದೆ ಎಂದು ಹೇಳುತ್ತಾರೆ. ಬಿಜೆಪಿಗೆ ಎಷ್ಟು ಸೀಟ್ ಬರುತ್ತದೆ ಎಂದು ನೋಡಿಕೊಳ್ಳಲಿ. ಮಂಡ್ಯ (Mandya) ಜಿಲ್ಲೆಯ ರೈತರು ಆತ್ಮಹತ್ಯೆ ಮಾಡಿಕೊಳ್ಳುವಾಗ ಅಶೋಕ್ ಸಾಮ್ರಾಟ್ ಎಲ್ಲಿ ಹೋಗಿದ್ದರು? ನಾನು ಸಿಎಂ ಆಗಿದ್ದಾಗ ಬಜೆಟ್ ಘೋಷಣೆ ಮಾಡಿದ್ದಕ್ಕೆ ಮಂಡ್ಯ ಬಜೆಟ್ ಎಂದರು. ಈಗ ಬಿಜೆಪಿ ಮಂಡ್ಯಕ್ಕೆ ಏನು ಮಾಡುತ್ತಿದೆ ಎಂದು ಪ್ರಶ್ನಿಸಿದರು.