ಜೈಪುರ: ರಾಜಸ್ಥಾನ (Rajastan) ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್ (Ashok Gehlot) ಅವರನ್ನು ರಾವಣನಿಗೆ ಹೋಲಿಸಿ ಟೀಕೆ ಮಾಡಿದ್ದ ಕೇಂದ್ರ ಸಚಿವ ಗಜೇಂದ್ರ ಶೇಖಾವತ್ (Gajendra Shekhawat) ಅವರ ವಿರುದ್ಧ ಕಾಂಗ್ರೆಸ್ (Congress) ಮುಖಂಡ ಸುರೇಂದ್ರ ಸಿಂಗ್ ಜಾದಾವತ್ ಚಿತ್ತೋರ್ಗಢದಲ್ಲಿ ಎಫ್ಐಆರ್ ದಾಖಲಿಸಿದ್ದಾರೆ.
ಇತ್ತೀಚೆಗೆ ಚಿತ್ತೋರಗಢದಲ್ಲಿ ನಡೆದ ರ್ಯಾಲಿಯಲ್ಲಿ ಮಾತನಾಡಿದ್ದ ಕೇಂದ್ರ ಸಚಿವ, ರಾವಣನಿಗೆ 10 ತಲೆಗಳಿದ್ದವು. ಅದೇ ರೀತಿ ಈ ರಾಜಸ್ಥಾನದ ಸರ್ಕಾರ ಹಾಗೂ ರಾಜಕೀಯದಲ್ಲಿ ಗೆಹ್ಲೋಟ್ ರಾವಣನಿದ್ದ ಹಾಗೇ. ಈ ಸರ್ಕಾರ ಭ್ರಷ್ಟಾಚಾರದ ಹರಿಕಾರವಾಗಿದ್ದು, ಓಲೈಕೆಯಲ್ಲಿ ತೊಡಗಿದೆ. ಜೊತೆಗೆ ರೈತರನ್ನು ಹಾಗೂ ಮಹಿಳೆಯರನ್ನು ದಬ್ಬಾಳಿಕೆ ಮಾಡುತ್ತದೆ. ಈ ಸರ್ಕಾರವು ಮಾಫಿಯಾ ರಾಜ್ನನ್ನು ಪೋಷಿಸುತ್ತಿದೆ. ಈ ರಾಜಕೀಯ ರಾವಣನನ್ನು ಮುಗಿಸುವ ಮೂಲಕ ರಾಜಸ್ಥಾನದಲ್ಲಿ ರಾಮರಾಜ್ಯವನ್ನು ಸ್ಥಾಪಿಸಬೇಕಾಗಿದೆ ಎಂದು ಹೇಳಿದ್ದರು.
ಧಾರ್ಮಿಕ ಭಾವನೆಗೆ ಧಕ್ಕೆ ಉಂಟು ಮಾಡಿದ ಮಾಡಿದ ಹಿನ್ನೆಲೆಯಲ್ಲಿ ಚಿತ್ತೋರ್ಗಢದ ಸದರ್ ಪೊಲೀಸ್ ಠಾಣೆಯಲ್ಲಿ ಎಫ್ಐಆರ್ ದಾಖಲಿಸಲಾಗಿದೆ. ಅಷ್ಟೇ ಅಲ್ಲದೇ ಕೇಂದ್ರ ಸಚಿವ ಗಜೇಂದ್ರ ಸಿಂಗ್ ಶೇಖಾವತ್ ಅವರ ರಾವಣ ಹೇಳಿಕೆಗೆ ರಾಜಸ್ಥಾನ ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್ ತಿರುಗೇಟು ನೀಡಿದ್ದಾರೆ.