ರಾಯಚೂರು: ರಾಮಮಂದಿರ (Ram Mandira) ನಿರ್ಮಾಣ ಕಾರ್ಯ ಮುಗಿಯುತ್ತಾ ಬಂದಿದೆ. ಆ ಶುಭ ಕಾರ್ಯಕ್ಕೆ ನಿಮಗೆ ಕರೆಯಲು ನಾನು ಬಂದಿದ್ದೇನೆ ಎಂದು ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ (Yogi Adityanath) ತಿಳಿಸಿದರು. ಬಿಜೆಪಿ (BJP) ಅಭ್ಯರ್ಥಿ ಡಾ.ಶಿವರಾಜ್ ಪಾಟೀಲ್ ಪರ ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ರಾಯಚೂರಿನಲ್ಲಿ (Raichur) ಮತಬೇಟೆ ನಡೆಸಿದರು.
ನಗರದ ಕೃಷಿ ವಿವಿ ಆವರಣದಲ್ಲಿ ಆಯೋಜಿಸಿದ್ದ ಸಾರ್ವಜನಿಕ ಸಭೆಯಲ್ಲಿ ಡಬಲ್ ಇಂಜಿನ್ ಸರ್ಕಾರದ ಯೋಜನೆಗಳ ಪಟ್ಟಿ ನೀಡಿ ಮತಶಿಕಾರಿ ನಡೆಸಿದರು. ಈ ವೇಳೆ ಮಾತನಾಡಿದ ಅವರು, ಉತ್ತರ ಪ್ರದೇಶದಲ್ಲಿ ವಾಲ್ಮೀಕಿ ಜಯಂತಿ ದಿನ ಎಲ್ಲಾ ದೇವಸ್ಥಾನದಲ್ಲಿ ಪೂಜೆ ನಡೆಯುತ್ತದೆ. ಅಯೋಧ್ಯೆಯಲ್ಲಿ (Ayodhya) ಭವ್ಯ ರಾಮಮಂದಿರ ನಿರ್ಮಾಣ ಕಾರ್ಯ ನಡೆದಿದೆ. ರಾಮಮಂದಿರ ನಿರ್ಮಾಣ ಕಾರ್ಯವು 2024ರ ಜನವರಿಯಲ್ಲಿ ಮುಗಿಯುತ್ತದೆ. ಹೊಸ ಅಯೋಧ್ಯೆ ದರ್ಶನ ನಿಮಗೆ ಸಿಗಲಿದೆ. ರಾಮನೇ ಇಲ್ಲವೆಂದು ಹೇಳುವವರೇ ಈಗ ರಾಮನ ಬಗ್ಗೆ ಮಾತನಾಡುತ್ತಿದ್ದಾರೆ ಎಂದರು.