ಶಿಡ್ಲಘಟ್ಟ: ನಮ್ಮ ತಾತನ ಕಾಲದಿಂದಲೂ ಕಾಂಗ್ರೆಸ್ ಪಕ್ಷ ಬಡವರ ಪಕ್ಷ ಅಂತ ನಂಬಿದ್ದೆವು, ಆದರೆ ಕಾಂಗ್ರೆಸ್ ಹಣವಂತರ ಪಕ್ಷ ಎಂದು ಗೊತ್ತಾಗಿದೆ. ಹಂಬಲದಿಂದ ಚುನಾವಣೆ ಗೆಲ್ಲಲು ಸಾದ್ಯವಿಲ್ಲ, ಮತದಾರರ ಪ್ರೀತಿಯಿಂದ ಮಾತ್ರ ಮತ ಪಡೆಯಲು ಸಾದ್ಯ, ಪ್ರಾಮಾಣಿಕವಾಗಿ ನಿಮ್ಮ ಸೇವೆ ಮಾಡಲು ಒಂದು ಅವಕಾಶ ಕೊಡಿ ಎಂದು ಸ್ವತಂತ್ರ ಅಭ್ಯರ್ಥಿ ಆಂಜಿನಪ್ಪ (ಪುಟ್ಟು) ಮನವಿ ಮಾಡಿದರು.
ತಾಲೂಕಿನ ಹಿತ್ತಲಹಳ್ಳಿ ಗೇಟ್ ಬಳಿ ಆಯೋಜಿಸಿದ್ದ ಸ್ವಾಭಿಮಾನಿ ಜನತಾ ಸಮಾವೇಶ ಕಾರ್ಯಕ್ರಮದಲ್ಲಿ ಸಾವಿರಾರು ಜನ ಮತದಾರರು ಹಾಗು ಆಂಜಿನಪ್ಪ ನವರ ಅಭಿಮಾನಿಗಳು ಸಮಾವೇಶ ಗೊಂಡಿದ್ದರು. ಕಾಂಗ್ರೆಸ್ ಟಿಕೆಟ್ ಆಕಾಂಕ್ಷಿಯಾಗಿದ್ದ ಅವರು ಟಿಕೆಟ್ ಕೈ ತಪ್ಪಿದ್ದರಿಂದ ಸ್ವತಂತ್ರ ವಾಗಿ ಸ್ಪರ್ಧಿಸಿದ್ದು, ಕ್ಷೇತ್ರದಾದ್ಯಂತ ಅಪಾರ ಜನ ಬೆಂಬಲ ವ್ಯಕ್ತವಾಗಿದೆ.
ವೇದಿಕೆಯಲ್ಲಿ ಮತದಾರರನ್ನು ಉದ್ದೇಶಿಸಿ ಮಾತನಾಡಿದ ಅವರು ನಾನು ಚುನಾವಣೆಗಾಗಿ ಎಲ್ಲಿಂದಲೋ ಬಂದವನಲ್ಲ, ಇಲ್ಲೇ ಇದ್ದು ಹತ್ತು ವರ್ಷಗಳಿಂದ ನಿಮ್ಮ ಸೇವೆ ಮಾಡಿಕೊಂಡು ಬಂದವನು. ಕಳೆದ ಬಾರಿ ಸ್ಪರ್ದಿಸಿದ್ದಾಗ ಮುಂದಿನ ಚುನಾವಣೆಯಲ್ಲಿ ಗೆಲ್ಲಿಸುವ ಭರವಸೆ ಕೊಟ್ಟಿದ್ದಿರಿ, ಕಳೆದ ಹತ್ತು ವರ್ಷಗಳಲ್ಲಿ ನಾನು ನಿಮ್ಮ ಪ್ರೀತಿ, ವಿಶ್ವಾಸ ಗಳಿಸಿದ್ದರೆ ಈಗ ನನಗೆ ಮತ ಕೊಟ್ಟು, ಆ ಮೂಲಕ ನಿಮ್ಮ ಮಾತು ಉಳಿಸಿಕೊಳ್ಳಿ ಎಂದರು.
ಪ್ರಾಮಾಣಿಕ ಸೇವೆ ಮಾಡಿರುವ ನನ್ನನ್ನು ಉಳಿಸಿಕೊಳ್ಳುವುದು ಬಿಡುವುದು ನಿಮ್ಮ ಕೈಯಲ್ಲಿದೆ ಯೋಚಿಸಿ ನಿರ್ದಾರ ತೆಗೆದುಕೊಳ್ಳಿ, ಕ್ಷೇತ್ರವು ಅಭಿವೃದ್ದಿ ಯಲ್ಲಿ 30 ವರ್ಷಗಳಷ್ಟು ಹಿಂದೆ ಬಿದ್ದದ್ದು, ಸರ್ಕಾರಿ ಶಾಲೆಗಳು, ಆಸ್ಪತ್ರೆಗಳಲ್ಲಿ ಉತ್ತಮ ಶಿಕ್ಷಣ ಹಾಗು ಆರೋಗ್ಯ ಸಿಗುವುದಾದರು ಯಾವಾಗ? ಯಾವುದೇ ಸರ್ಕಾರಿ ಕಚೇರಿಗಳಲ್ಲಿ ಬಡವರ ಹಾಗು ರೈತರ ಕೆಲಸಗಳು ಸಕಾಲಕ್ಕೆ ಆಗಿವಿಯೇ ಎಂದು ಪ್ರಶ್ನಿಸಿದರು. ಶಾಸಕರಿಗೆ ಇಚ್ಛಾಶಕ್ತಿ ಇಲ್ಲದ ಕಾರಣ ಕ್ಷೇತ್ರವು ಅಭಿವೃದ್ಧಿಯಲ್ಲಿ ಹಿಂದೆ ಬಿದ್ದಿದೆ, ಅಧಿಕಾರ ಇಲ್ಲದಿದ್ದರೂ ನಿಮ್ಮ ಸೇವೆ ಮಾಡುವ ಹಾಗು ಅಭಿವೃದ್ಧಿ ಬೆಂಬಲಿಸುವ ನನಗೆ ಮತ ಕೊಡಿ ಎಂದು ಮಾತನಾಡುತ್ತಾ ಭಾವೋದ್ವೇಗಕ್ಕೆ ಒಳಗಾದರು. ಈ ಸಂದರ್ಭದಲ್ಲಿ ಗ್ರಾ ಪಂ ಸದಸ್ಯ ಬೆಳ್ಳೂಟಿ ಸಂತೋಷ್, ಅಶ್ವಥ್ ನಾರಾಯಣರೆಡ್ಡಿ ಇನ್ನಿತರರು ಉಪಸ್ಥಿತರಿದ್ದರು.