ಮೈಸೂರು: ಈ ಬಾರಿ ವಿಧಾನಸಭಾ ಚುನಾವಣೆಯಲ್ಲಿ ಜಿಲ್ಲೆಯ 11 ಕ್ಷೇತ್ರದಿಂದ 26,55,988 ಮತದಾರರು ಮತದಾನ ಮಾಡಲಿದ್ದಾರೆ. ಇವರಲ್ಲಿ 1,66,633 ಮತದಾರರು ಮೊದಲ ಬಾರಿಗೆ ತಮ್ಮ ಹಕ್ಕು ಚಲಾಯಿಸಲಿದ್ದಾರೆ. 2018ರ ವಿಧಾನ ಸಭಾ ಚುನಾವಣೆಯಲ್ಲಿ 24,89355 (ಪುರುಷ-939360, ಮಹಿಳೆ-939360, ತೃತೀಯಲಿಂಗಿ-172) ಮತದಾನ ಮಾಡುವ ಅರ್ಹತೆ ಪಡೆದಿದ್ದರು. 2022ರ ಚುನಾವಣೆಯಲ್ಲಿ ಏ. 20ರಂದು ಅಂತಿಮಗೊಂಡ ಮತದಾರರ ಪಟ್ಟಿಯನ್ವಯ ಜಿಲ್ಲೆಯ 11 ಕ್ಷೇತ್ರಗಳಿಂದ 26,55,988 (ಪುರುಷ-1317121, ಮಹಿಳೆ-1338637, ತೃತೀಯಲಿಂಗಿ-230) ಮತದಾರರು ಪ್ರಜಾಪ್ರಭುತ್ವದ ಮಹತ್ವದ ಪ್ರಕ್ರಿಯೆಯಲ್ಲಿಪಾಲ್ಗೊಳ್ಳುವ ಹಕ್ಕು ಪಡೆದುಕೊಂಡಿದ್ದಾರೆ.
ಜಿಲ್ಲೆ ಎಲ್ಲಾ 11 ಕ್ಷೇತ್ರಗಳಲ್ಲಿ ಈ ಬಾರಿ ಚಾಮುಂಡೇಶ್ವರಿ ಕ್ಷೇತ್ರದಲ್ಲಿ ಅತಿ ಹೆಚ್ಚು ಮತದಾರರನ್ನು (3,29,141) ಹೊಂದಿದೆ. ಕಳೆದ ಬಾರಿ ಚುನಾವಣೆಯಲ್ಲಿ ಎಲ್ಲಾ ಕ್ಷೇತ್ರಗಳಿಗಿಂತ ನಗರ ವ್ಯಾಪ್ತಿಯ ಕೃಷ್ಣರಾಜ ಕ್ಷೇತ್ರದಲ್ಲಿ ಅತಿ ಹೆಚ್ಚು (2,47,084)ಮತದಾರರಿದ್ದರು. ಮಾತ್ರವಲ್ಲದೇ ಕಳೆದ ಬಾರಿ ಜಿಲ್ಲೆಯಲ್ಲಿಯೇ ಕಡಿಮೆ ಮತದಾರರನ್ನು ಹೊಂದಿದ ಕ್ಷೇತ್ರವಾಗಿ ಪಿರಿಯಾಪಟ್ಟಣ (1,80,411)ಗುರುತಿಸಿಕೊಂಡಿದ್ದು, ಈ ಬಾರಿಯೂ(1,95,458) ಅದೇ ಸ್ಥಾನವನ್ನು ಉಳಿಸಿಕೊಂಡಿದೆ.
ಪಿರಿಯಾಪಟ್ಟಣ-2325, ಕೆ.ಆರ್.ನಗರ-250, ಹುಣಸೂರ-273, ಎಚ್.ಡಿ.ಕೋಟೆ-282, ನಂಜನಗೂಡು-249, ಚಾಮುಂಡೇಶ್ವರಿ-337, ಕೃಷ್ಣರಾಜ-265, ಚಾಮರಾಜ-244, ನರಸಿಂಗರಾಜ-282, ವರುಣ-261, ತಿ.ನರಸೀಪುರ-227 ಸೇರಿದಂತೆ ಜಿಲ್ಲೆಯಲ್ಲಿ ಒಟ್ಟು 11 ಕ್ಷೇತ್ರಗಳಿಂದ ಒಟ್ಟು 2,905 ಮತಗಟ್ಟೆಗಳಿವೆ. ಮತದಾನಕ್ಕೆ ಬರುವವರು ಮತಕೇಂದ್ರದಲ್ಲಿ ಕನಿಷ್ಠ ಸೌಲಭ್ಯಗಳು ಇರದಿದ್ದರೆ ಮತಕೇಂದ್ರದತ್ತ ಬರುವುದಿಲ್ಲ. ಇದನ್ನು ಗಮನಿಸಿ ಈ ಬಾರಿ ಮತದಾನ ಪ್ರಮಾಣವನ್ನು ಹೆಚ್ಚಿಸಬೇಕೆಂಬ ಉದ್ದೇಶದಿಂದ ಎಲ್ಲಾ ಬೂತ್ಗಳಲ್ಲಿಯೂ ಶೌಚಾಲಯ, ಕುಡಿಯುವ ನೀರು ಸೇರಿದಂತೆ ಹಲವು ಕನಿಷ್ಠ ಮೂಲ ಸೌಕರ್ಯ ಒದಗಿಸಲಾಗಿದೆ. ನಾಲ್ಕು ತಿಂಗಳಿಂದಲೇ ಮತ ಕೇಂದ್ರಗಳ ಸಿದ್ಧತಾ ಕಾರ್ಯ ಆರಂಭಿಸಲಾಗಿದೆ. ಇದಕ್ಕಾಗಿ ಜಿಲ್ಲೆಯ ಅಧಿಕಾರಿಗಳು ಹಗಲಿರುಳು ಶ್ರಮಿಸಿದ್ದಾರೆ ಎಂದು ಜಿಲ್ಲಾಧಿಕಾರಿ ಡಾ.ಕೆ.ವಿ.ರಾಜೇಂದ್ರ ಮಾಧ್ಯಮಕ್ಕೆ ತಿಳಿಸಿದರು.
ಜಾಲತಾಣ ಬಳಕೆ ಮಾಡಿಕೊಳ್ಳಿ
ಯುವ ಮತದಾರರು ಸಿ- ವಿಜಿಲ್ ಆ್ಯಪ್ ಬಳಕೆ ಮಾಡಲು ಆರಂಭಿಸಬೇಕು. ಇದರಲ್ಲಿಯಾವುದೇ ಚುನಾವಣೆ ಅಕ್ರಮಗಳು ಕಂಡುಬಂದಾಗ ಅವುಗಳ ಬಗ್ಗೆ ಮಾಹಿತಿ ನೀಡಲು ಅವಕಾಶ ಕಲ್ಪಿಸಿಕೊಡಲಾಗಿದೆ. ಸಾರ್ವಜನಿಕರಿಗಾಗಿಯೇ ಮಾಡಿರುವ ಈ ಆ್ಯಪ್ನಲ್ಲಿಈವರೆಗೆ ಕೇವಲ 120 ದೂರು ಬಂದಿವೆ. ಅನಧಿಕೃತವಾಗಿ ಗೋಡೆ ಬರಹ ಬರೆದಿರುವುದು, ಫ್ಲೆಕ್ಸ್ ಬಳಕೆ ಮಾಡಿರುವುದರ ಬಗ್ಗೆ ಮೊಬೈಲ್ನಲ್ಲಿಫೋಟೊ ತೆಗೆದು ಆ್ಯಪ್ಗೆ ಅಪ್ಲೋಡ್ ಮಾಡಬೇಕು. ಇದನ್ನು ಚುನಾವಣಾಧಿಕಾರಿಗಳು ಗಮನಿಸಿ ಕ್ರಮ ಕೈಗೊಳ್ಳುತ್ತಾರೆ. ಸಾರ್ವಜನಿಕರು ಚೆಕ್ಪೋಸ್ಟ್ಗಳಲ್ಲಿಕೈಗೊಂಡಿರುವ ಕ್ರಮಗಳ ಬಗ್ಗೆ ಅನುಮಾನ ವ್ಯಕ್ತಪಡಿಸದೆ ತಾವೇ ನೇರವಾಗಿ ವರದಿ ಮಾಡುವ ಮೂಲಕ ಚುನಾವಣೆ ಆಯೋಗದ ಕಣ್ಣು, ಕಿವಿಗಳಾಗಿ ಅಕ್ರಮ ಮುಕ್ತ ಚುನಾವಣೆಗೆ ಸಹಕರಿಸಿ ಎಂಬುದು ಜಿಲ್ಲಾಧಿಕಾರಿ ಡಾ.ಕೆ.ವಿ. ರಾಜೇಂದ್ರ ಮನವಿ.