ಧಾರವಾಡ: ಇಷ್ಟು ದಿನ ಬಿಜೆಪಿ ಶಾಸಕರನ್ನೇ ಬೈದಾಡಿಕೊಂಡು ಅಡ್ಡಾಡಿದ ಬಸವರಾಜ ಕೊರವರ ಇಂದು ಅದೇ ಪಕ್ಷಕ್ಕೆ ಬೆಂಬಲ ನೀಡಿ ನನ್ನನ್ನು ಬೈಯುವ ಕೆಲಸ ಮಾಡಿದ್ದನ್ನು ನೋಡಿದರೆ ಅವರು ಹಣಕ್ಕೆ ಬುಕ್ ಆಗಿದ್ದಾರೆ ಎಂದು ಬಸವರಾಜ ಕೊರವರ ವಿರುದ್ಧ ಪರೋಕ್ಷವಾಗಿ ಮಾಜಿ ಸಚಿವ ವಿನಯ್ ಕುಲಕರ್ಣಿ ಹರಿಹಾಯ್ದಿದ್ದಾರೆ.ಚೆನ್ನಮ್ಮನ ಕಿತ್ತೂರಿನಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ದುಡ್ಡು ತೆಗೆದುಕೊಂಡು ಮಾತನಾಡುವವರಿಗೆ ನಾನು ಪ್ರತಿಕ್ರಿಯೆ ನೀಡುವುದಿಲ್ಲ. ಇಷ್ಟು ದಿನ ತಮ್ಮ ಬಿಜೆಪಿ ಶಾಸಕರನ್ನೇ ಬೈದಾಡಿಕೊಂಡು ಅಡ್ಡಾಡಿದ ಅವರು ಈಗ ನನ್ನ ವಿರುದ್ಧ ಮಾತನಾಡುತ್ತಿದ್ದಾರೆ ಅದಕ್ಕೆ ನಾನು ಪ್ರತಿಕ್ರಿಯೆ ನೀಡುವುದಿಲ್ಲ ಎಂದರು.
ಇವತ್ತು ಕೋರ್ಟ್ ನನಗೆ ಜಿಲ್ಲಾ ಪ್ರವೇಶಕ್ಕೆ ಅನುಮತಿ ಕೊಟ್ಟಿಲ್ಲ. ಹೊರಗಡೆ ಇದ್ದುಕೊಂಡೇ ನಾನು ಕೆಲಸ ಮಾಡುತ್ತಿದ್ದೇನೆ. ಕ್ಷೇತ್ರದ ಜನ ಇದೀಗ ಕಾಂಗ್ರೆಸ್ನತ್ತ ಮುಖ ಮಾಡಿದ್ದಾರೆ. ಮರಳಿ ನನಗೆ ಅವಕಾಶ ಕೊಡಲು ಉತ್ಸುಕರಾಗಿದ್ದಾರೆ. ನನ್ನ ಮೇಲೆ ಬಿಜೆಪಿ ಷಡ್ಯಂತ್ರ ನಡೆಸಿದೆ ಎಂಬ ಹೇಳಿಕೆಗೆ ನಾನು ಈಗಲೂ ಬದ್ಧನಿದ್ದೇನೆ. ಏಕೆಂದರೆ ಕೋರ್ಟ್ನಲ್ಲಿ ಯಾರ್ಯಾರು ಬಂದು ಕುಳಿತಿರುತ್ತಾರೆ ಎಂಬುದನ್ನು ನೀವು ನೋಡಿದರೆ ನಿಮಗೇ ಗೊತ್ತಾಗುತ್ತದೆ. ನಾನು ಅಷ್ಟೇ ಅಲ್ಲ ರಾಜ್ಯದ ಅನೇಕ ನಾಯಕರ ಮೇಲೆ ಬಿಜೆಪಿ ಷಡ್ಯಂತ್ರ ನಡೆಸಿದೆ ಎಂದರು.ಇಂದಿಗೂ ಅನೇಕರ ಮೇಲೆ ಐಟಿ ರೇಡ್ ಮಾಡಿಸಲಾಗುತ್ತಿದೆ. ಕಳೆದ ಬಾರಿಯ ಚುನಾವಣೆಯಲ್ಲಿ ಬಿಜೆಪಿಯವರು ನಮ್ಮ ಪಿಎ ಮನೆಗಳ ಮೇಲೆ ಐಟಿ ದಾಳಿ ನಡೆಸಿ ಅವರು ಹೊರಗಡೆ ಬರದಂತೆ ಮಾಡಿತು ಎಂದರು.
ನನ್ನ ಅವಧಿಯಲ್ಲಿ ಆದಂತ ಕೆಲಸಗಳನ್ನು ಮುಂದಿಟ್ಟುಕೊಂಡು ನನ್ನ ಪತ್ನಿ ಹಾಗೂ ಕಾರ್ಯಕರ್ತರು ಮತ ಕೇಳುತ್ತಿದ್ದಾರೆ. ರೈತರಿಗೆ, ವಿದ್ಯಾರ್ಥಿಗಳಿಗೆ, ಯುವಕರಿಗೆ ನಾವು ಕೊಟ್ಟಂತ ಯೋಜನೆಗಳು ಇಂದು ನನ್ನ ಕೈ ಹಿಡಿಯುತ್ತಿವೆ. ಕಳೆದ ಐದು ವರ್ಷಗಳ ಅವಧಿಯಲ್ಲಿ ಬಿಜೆಪಿ ಶಾಸಕರು ಜನರ ಸಮಸ್ಯೆಗಳಿಗೆ ಸ್ಪಂದಿಸುವ ಕೆಲಸವನ್ನೇ ಮಾಡಿಲ್ಲ. ಒಂದೂ ಜನಸಂಪರ್ಕ ಸಭೆ ನಡೆಸಿಲ್ಲ. ಕಾಂಗ್ರೆಸ್ಗೆ ಬೆಂಬಲ ನೀಡಿದಂತವರಿಗೆ ಕಿರುಕುಳ ನೀಡುವ ಕೆಲಸ ಮಾಡಿದ್ದಾರೆ. ಒಂದು ಲಕ್ಷ ರೂಪಾಗಿ ಕೊಟ್ಟಂತವರಿಗೆ ಮಾತ್ರ ಮನೆ ಹಾಕಿಸಿಕೊಟ್ಟಿದ್ದಾರೆ. ವಿನಯ್ ಕುಲಕರ್ಣಿ ಯಾರು ಎಂಬುದು ನನ್ನ ಕ್ಷೇತ್ರದ ಜನರಿಗೆ ಗೊತ್ತಿದೆ. ನ್ಯಾಯಾಂಗದ ಮೇಲೆ ನನಗೆ ಭರವಸೆ ಇದೆ. ಸತ್ಯಕ್ಕೆ ಜಯ ಸಿಕ್ಕೇ ಸಿಗುತ್ತದೆ. ಬಿಜೆಪಿಯವರು ಹಾಲಿನಲ್ಲಿ ಹರಳು ಒಗೆಯುವ ಕೆಲಸ ಮಾಡಿದ್ದಾರೆ ಎಂದರು.
ಇಂದು ಕ್ಷೇತ್ರದಲ್ಲಿ ನನ್ನ ಪತ್ನಿಗೆ ಒಳ್ಳೆಯ ಸ್ಪಂದನೆ ಸಿಗುತ್ತಿದೆ. ಎಲ್ಲರೂ ಆಕೆಯನ್ನು ಮನೆಯ ಮಗಳಂತೆ ಕಾಣುತ್ತಿದ್ದಾರೆ. ನಾನು ಜಿಲ್ಲೆಯ ಹೊರಗಿದ್ದರೂ ಕೆಲಸ ಮಾಡುತ್ತೇನೆ. ಈ ಬಾರಿ ನನ್ನ ಕ್ಷೇತ್ರ ಮಾತ್ರವಲ್ಲ ಇಡೀ ರಾಜ್ಯದಲ್ಲೇ ಕಾಂಗ್ರೆಸ್ ಪರ ಅಲೆ ಇದೆ. ಈಗಿನ ಸರ್ಕಾರ ಮಾಡಿದಷ್ಟು ಭ್ರಷ್ಟಾಚಾರವನ್ನು ಯಾವ ಸರ್ಕಾರವೂ ಮಾಡಿಲ್ಲ. ನಾನು ಮಾಡಿದ ಕೆರೆಗೆ ನೀರು ತುಂಬಿಸುವ ಕೆಲಸ, ಮಂದಿರ ನಿರ್ಮಾಣ ಸೇರಿದಂತೆ ಇತ್ಯಾದಿ ಕೆಲಸಗಳಿಗೆ ಬಿಜೆಪಿ ಶಾಸಕರು ತಮ್ಮ ಹೆಸರು ಹಾಕಿಸಿಕೊಳ್ಳುವ ಕೆಲಸ ಮಾಡಿದ್ದಾರೆ. ನನ್ನ ಕ್ಷೇತ್ರಕ್ಕೆ ಯಾವುದೇ ಸ್ಟಾರ್ ಪ್ರಚಾರಕರ ಅವಶ್ಯಕತೆ ಇಲ್ಲ. ನನ್ನ ಕಾರ್ಯಕರ್ತರೇ ನನ್ನ ಸ್ಟಾರ್ ಪ್ರಚಾರಕರು. ಸಿದ್ದರಾಮಯ್ಯ ಒಬ್ಬರು ನನ್ನ ಕ್ಷೇತ್ರಕ್ಕೆ ಬರುತ್ತೇನೆ ಎಂದಿದ್ದಾರೆ. ದುಂದು ವೆಚ್ಚ ಮಾಡುವವನು ನಾನಲ್ಲ ಎಂದರು.
ಅಮ್ಮಿನಭಾವಿಯಲ್ಲಿ ಸುದೀಪ್ ಅವರು ಕರೆಕ್ಟ್ ಆಗಿಯೇ ಹೇಳಿದ್ದಾರೆ. ಅಭಿವೃದ್ಧಿ ಯಾರು ಮಾಡುತ್ತಾರೋ ಅವರಿಗೆ ಮತ ಹಾಕಿ ಎಂದಿದ್ದಾರೆ ಅದು ಕರೆಕ್ಟ್ ಆಗಿಯೇ ಇದೆ. ಇಂದಿಗೂ ನಮ್ಮ ಫೋನ್ಗಳನ್ನು ಟ್ಯಾಪ್ ಮಾಡಲಾಗುತ್ತಿದೆ. ಕಾಲ್ ರೆಕಾರ್ಡ್ ಮಾಡಲಾಗುತ್ತಿದೆ. ನಾವು ಏನಾದರೂ ಮಾತನಾಡಿದರೆ ಅದು 10 ನಿಮಿಷಕ್ಕೆ ಬಿಜೆಪಿಯವರಿಗೆ ಮಾಹಿತಿ ಮುಟ್ಟುತ್ತದೆ. ಈ ದೇಶದಲ್ಲಿ ಪ್ರಜಾಪ್ರಭುತ್ವದ ಕಗ್ಗೊಲೆ ಆಗುತ್ತಿದೆ. ಆದ್ದರಿಂದ ಪ್ರಜಾಪ್ರಭುತ್ವದ ಉಳಿವಿಗೆ ಕಾಂಗ್ರೆಸ್ ಅವಶ್ಯವಿದೆ. ಈ ಬಾರಿ ನಾವು 146 ಸೀಟುಗಳನ್ನು ಗೆಲ್ಲುತ್ತೇವೆ ಎಂದರು.
1700 ಕೋಟಿ ವೆಚ್ಚದ ಕಾಮಗಾರಿ ಎಲ್ಲಿ ಮಾಡಿದ್ದಾರೆ ಎಂದು ಶಾಸಕರು ತೋರಿಸಲಿ. ಯಾವ ಸರ್ಕಾರ ಇದ್ದಾಗ ಏನೇನು ಕೆಲಸ ಆಗಿವೆ ಎನ್ನುವುದನ್ನು ಜನರೇ ಹೇಳುತ್ತಾರೆ. ನಾನು ಯಾರದ್ದೂ ಒಂದು ಗುಂಟೆ ಜಾಗ ಕಬಳಿಸಿಲ್ಲ. ನಾನು ನನ್ನ ಸ್ವಾರ್ಥಕ್ಕೆ ಏನೂ ಮಾಡಿಕೊಂಡಿಲ್ಲ. ಹಫ್ತಾ ವಸೂಲಿ ಮಾಡುವನಲ್ಲ. ಪ್ರತಿದಿನ ನಮ್ಮ ಪಕ್ಷಕ್ಕೆ 500-600 ಜನ ಸೇರ್ಪಡೆಯಾಗುತ್ತಿದ್ದಾರೆ ಎಂದರು.
ಕೋಟೂರು ಕೊಲೆ ಪ್ರಕರಣವನ್ನು ಸಂಸದರು ಸಿಬಿಐ ತನಿಖೆಗೆ ನೀಡಲಿ ನೋಡೋಣ. ಅದನ್ನು ಪ್ರಾಮಾಣಿಕವಾಗಿ ತನಿಖೆ ಮಾಡಿಸಲಿ. ಇಂತಹ ಕಳಪೆಮಟ್ಟದ ರಾಜಕಾರಣವನ್ನು ಬಿಜೆಪಿ ಮಾಡುತ್ತಿದೆ. ನೆರೆ ಪ್ರವಾಹ ಬಂದಾಗ ಬರದ ಮೋದಿ ಇಂದು ರಾಜ್ಯಕ್ಕೆ ಬರುತ್ತಿದ್ದಾರೆ ಎಂದು ವಿನಯ್ ಅವರು ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದರು.