ಬೆಂಗಳೂರು: ಉಚಿತ ಭರವಸೆ ಮೂಲಕ ಬಿಜೆಪಿ ರಾಜ್ಯದ ಜನರ ಕಿವಿಗೆ ಹೂ ಇಟ್ಟಿದೆ ಎಂದು ವಿಪಕ್ಷ ನಾಯಕ ಸಿದ್ದರಾಮಯ್ಯ(Siddaramaiah) ಹೇಳಿದ್ದಾರೆ. ಈ ಸಂಬಂಧ ಶಿವಾನಂದ ವೃತ್ತದ ಬಳಿ ಮಾತನಾಡಿದ ಅವರು, ಬಿಜೆಪಿ ತನ್ನ ಪ್ರಣಾಳಿಕೆಯಲ್ಲಿ ಅನ್ನ, ಅಭಯ, ಅಕ್ಷರ, ಅಭಿವೃದ್ಧಿ ಮತ್ತು ಆದಾಯಗಳ ಭರವಸೆಗಳನ್ನು ನೀಡಿದೆ. ಕಳೆದ ಮೂರುವರೆ ವರ್ಷಗಳ ಅವಧಿಯ ರಾಜ್ಯದ ಬಿಜೆಪಿ(BJP) ಸರ್ಕಾರ ಈ ಐದು ಭರವಸೆಗಳನ್ನು ಜನರಿಂದ ಕಸಿದುಕೊಂಡಿದೆ. ಸರ್ಕಾರದ ಪ್ರತಿಯೊಂದು ಇಲಾಖೆಯಲ್ಲಿಯೂ 40 ಪರ್ಸೆಂಟ್ ಕಮಿಷನ್ ಹಾವಳಿಯ ಮೂಲಕ ಅಭಿವೃದ್ಧಿಯನ್ನು ಕಸಿದುಕೊಂಡಿದೆ ಎಂದು ಆರೋಪಿಸಿದ್ದಾರೆ.
ರಾಜ್ಯದ ಗೃಹ ಸಚಿವರ ಅದಕ್ಷತೆ ಮತ್ತು ಭ್ರಷ್ಟತೆಯಿಂದಾಗಿ ಅಪರಾಧ ಪ್ರಕರಣಗಳು ಹೆಚ್ಚಾಗಿರುವುದು ಮಾತ್ರವಲ್ಲ, ರೌಡಿ-ಗೂಂಡಾಗಳೆಲ್ಲ ಮುಕ್ತವಾಗಿ ಓಡಾಡಲು ಸ್ವಾತಂತ್ರ್ಯ ಪಡೆದಿರುವ ಕಾರಣ ಜನತೆಯ ಭದ್ರತೆಯ ಅಭಯವನ್ನೂ ಕಸಿದುಕೊಂಡಿದೆ. ಅಡುಗೆ ಅನಿಲ ಸಿಲಿಂಡರ್ ಬೆಲೆಯನ್ನು ರೂ.410 ರಿಂದ ರೂ.1105ಕ್ಕೆ ಏರಿಸಿರುವ ಮತ್ತು ಅಡುಗೆ ಅನಿಲದ ಮೇಲಿನ ಸಬ್ಸಿಡಿಯನ್ನು ರದ್ದುಪಡಿಸಿರುವ ಬಿಜೆಪಿ ಈಗ ಅಡುಗೆ ಅನಿಲದ ಮೂರು ಸಿಲಿಂಡರ್ ಗಳನ್ನು ಉಚಿತವಾಗಿ ನೀಡುವುದಾಗಿ ಭರವಸೆ ನೀಡುವ ಮೂಲಕ ರಾಜ್ಯದ ಜನರ ಕಿವಿಗೆ ಹೂ ಇಟ್ಟಿದೆ ಎಂದು ಸಿದ್ದರಾಮಯ್ಯ ಟೀಕಿಸಿದ್ದಾರೆ.