ಯಾದಗಿರಿ: ಬಿಜೆಪಿಯ (BJP) ಚುನಾವಣಾ ಪ್ರಣಾಳಿಕೆ ಎಲ್ಲಾ ಚುನಾವಣಾ ಗಿಮಿಕ್. ಮೂರುವರೆ ವರ್ಷ ಆಡಳಿತ ಮಾಡಿದ್ದಾರೆ. ಈ ಎಲ್ಲಾ ಕಾರ್ಯಕ್ರಮ ತರೋಕೆ ಅವಕಾಶ ಇತ್ತಲ್ವಾ? ಆಗ ಯಾಕೆ ತರಲಿಲ್ಲ? ಹಾಲು ಕೊಡೋದು ಆಗಲೇ ಮಾಡಬಹುದಿತ್ತಲ್ವಾ? ಉಚಿತ ಘೋಷಣೆಗಳ ಬಗ್ಗೆ ಪ್ರಧಾನಿ ನರೇಂದ್ರ ಮೋದಿ (Narendra Modi) ಅವರು ದಿನಾ ಜಾಗಟೆ ಹೊಡೆಯುತ್ತಿದ್ದರು. ಫ್ರೀ ಕೊಡಬಾರದು ಅಂತ ಮೋದಿನೇ ಹೇಳುತ್ತಿದ್ದರು. ಈಗ ಅವರಿಗೆ ಘೋಷಣೆ ಮಾಡಲು ಅನುಮತಿ ಯಾರು ಕೊಟ್ರು? ಎಂದು ಮಾಜಿ ಸಿಎಂ ಹೆಚ್ ಡಿ ಕುಮಾರಸ್ವಾಮಿ (HD Kumaraswamy) ಬಿಜೆಪಿಗೆ ಸವಾಲು ಹಾಕಿದ್ದಾರೆ.
ಯಾದಗಿರಿ (Yadgiri) ಜಿಲ್ಲೆಯ ಶಹಾಪುರ ನಗರದಲ್ಲಿ ಮಾತನಾಡಿದ ಹೆಚ್ಡಿಕೆ, ಕಾಂಗ್ರೆಸ್ನ ಗ್ಯಾರಂಟಿಗಳ ಬಗ್ಗೆ ಡೂಪ್ಲಿಕೇಟ್ ಅಂತ ಚರ್ಚೆ ಮಾಡುತ್ತಿದ್ದರು. ಹಾಗಿದ್ದರೆ ಇವರದ್ದು ಏನು? ಮೂರುವರೆ ವರ್ಷ ಅಧಿಕಾರದಲ್ಲಿದ್ರು. ಗ್ಯಾಸ್ ಬೆಲೆ ಹೆಚ್ಚಾಗಿದೆ. ಅವಾಗ ಯಾಕೆ ಕಮ್ಮಿ ಮಾಡಲಿಲ್ಲ? ಮೂರುವರೆ ವರ್ಷದಲ್ಲಿ ಹಣ ಲೂಟಿ ಮಾಡೋದು ಬಿಟ್ಟು ಜನಸಾಮಾನ್ಯರ ಬಗ್ಗೆ ನೋಡಲಿಲ್ಲ. ಬರೀ ಜನರ ಜೊತೆ ಚೆಲ್ಲಾಟವಾಡಿದರು. ಈಗ 2 ರಾಷ್ಟ್ರೀಯ ಪಕ್ಷಗಳ ಘೋಷಣೆಗಳ ಬಗ್ಗೆ ಜನರಲ್ಲಿ ಭ್ರಮನಿರಸನವಿದೆ ಎಂದರು.
ಎನ್ಕೌಂಟರ್ ಮಾಡಲಾಗುತ್ತೆ ಎನ್ನುವ ಬಸನಗೌಡ ಪಾಟೀಲ್ ಯತ್ನಾಳ್ ಹೇಳಿಕೆ ವಿಚಾರವಾಗಿ ಮಾತನಾಡಿದ ಅವರು, ಆ ತರಹ ಆದರೆ ಮೊದಲು ಯತ್ನಾಳ್ ಅವರಿಗೆ ಎನ್ಕೌಂಟರ್ ಮಾಡಬೇಕಲ್ವಾ? ಅವರ ಪಕ್ಷದಲ್ಲಿ ಯಾರ್ ಯಾರು ಏನೇನು ಮಾತಾಡಿಕೊಂಡಿದ್ದಾರೆ? ನಿರಾಣಿ ಬಗ್ಗೆ ಯತ್ನಾಳ್, ಯತ್ನಾಳ್ ಬಗ್ಗೆ ನಿರಾಣಿ ಏನೇನೋ ಮಾತಾಡಿಕೊಂಡಿಲ್ವಾ? ಮೊದಲು ಇವೆಲ್ಲ ಅವರ ಮೇಲೆ ಮಾಡಬೇಕಲ್ವಾ? ನಾನು ಆ ತರಹದ ಪದಗಳನ್ನು ಬಳಕೆ ಮಾಡಲ್ಲ. ನಾನು ತಮಾಷೆಗೆ ಹೇಳಿದ್ದೇನೆ. ನಾನು ಆ ಮಟ್ಟಕ್ಕೆ ಇಳಿಯಲ್ಲ ಎಂದು ಕುಮಾರಸ್ವಾಮಿ ತಮ್ಮ ಮಾತನ್ನು ಸರಿಪಡಿಸಿಕೊಂಡರು.