ಮಂಡ್ಯ :- ಮದ್ದೂರು ವಿಧಾನಸಭಾ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿ ಎಸ್.ಪಿ.ಸ್ವಾಮಿ ಅವರ ಪ್ರಚಾರದ ಭರಾಟೆ ದಿನದಿಂದ ದಿನಕ್ಕೆ ಜೋರಾಗುತ್ತಿದ್ದು, ಪ್ರಚಾರಕ್ಕೆ ಮತ್ತಷ್ಟು ಪುಷ್ಟಿ ನೀಡಲು ಸೋಮವಾರ ಸ್ವತಃ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರೇ ಪ್ರಚಾರದ ಅಖಾಡಕ್ಕೆ ಧುಮುಕಿ ಮದ್ದೂರು ಪಟ್ಟಣದ ವಿವಿಧೆಡೆ ಭರ್ಜರಿ ರೋಡ್ ಶೋ ನಡೆಸಿ ಎಸ್.ಪಿ.ಸ್ವಾಮಿ ಅವರ ಪರ ಮತ ಯಾಚಿಸಿದರು.
ಮದ್ದೂರು ಪಟ್ಟಣದ ಪ್ರವಾಸಿ ಮಂದಿರದ ವೃತ್ತಕ್ಕೆ ಸಂಜೆ ಆಗಮಿಸಿದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಸಂಸದೆ ಸುಮಲತಾ ಅಂಬರೀಶ್, ನಟಿ ತಾರಾ ಅನುರಾಧ ಮತ್ತು ಗಣ್ಯರನ್ನು ಬಿಜೆಪಿ ತಾಲೂಕು ಘಟಕ ಹಾಗೂ ಅಭ್ಯರ್ಥಿ ಎಸ್.ಪಿ.ಸ್ವಾಮಿ ಅದ್ದೂರಿ ಸ್ವಾಗತ ನೀಡಿ ಬರಮಾಡಿಕೊಂಡರು. ಬಳಿಕ ಹಳೇ ಎಂ.ಸಿ.ರಸ್ತೆ ಮೂಲಕ ತೆರೆದೆ ವಾಹನದಲ್ಲಿ ರೋಡ್ ಶೋ ನಡೆಸಿ ರಾಮಮಂದಿರ ಪಾರ್ಕ್ ಬಳಿ ಸಾರ್ವಜನಿಕರನ್ನು ಉದ್ದೇಶಿಸಿ ಮಾತನಾಡಿ ಬಿಜೆಪಿ ಅಭ್ಯರ್ಥಿ ಎಸ್.ಪಿ.ಸ್ವಾಮಿ ಅವರನ್ನು ಅತ್ಯಧಿಕ ಮತಗಳ ಅಂತರದಿಂದ ಗೆಲ್ಲಿಸುವಂತೆ ಮನವಿ ಮಾಡಿದರು.
ಸತತ 16 ವರ್ಷಗಳ ಕಾಲ ಸಮಾಜ ಸೇವೆ ಮತ್ತು ಕೋವಿಡ್ ಸೇರಿದಂತೆ ಅನೇಕ ಸಂದರ್ಭಗಳಲ್ಲಿ ನಿಮ್ಮ ಕಷ್ಟಗಳಿಗೆ ಮನೆ ಮಗನಾಗಿ ಎಸ್.ಪಿ.ಸ್ವಾಮಿ ಸ್ಪಂದಿಸಿದ್ದಾರೆ. ಈಗ ಆ ಋಣ ತೀರಿಸುವ ಕಾಲ ಬಂದಿದೆ ಎಂದರು. ಎಸ್.ಪಿ.ಸ್ವಾಮಿ ಅವರಿಗೆ ಸಮಾಜ ಸೇವೆ ಜೊತೆಗೆ ರಾಜಕೀಯವಾಗಿ ಶಕ್ತಿ ತುಂಬುವ ಸಂದರ್ಭ ಬಂದಿದ್ದು, ಇವರನ್ನು ಗೆಲ್ಲಿಸುವ ಮೂಲಕ ರಾಜ್ಯದಲ್ಲಿ ಮತ್ತೊಮ್ಮೆ ಬಿಜೆಪಿ ಸರ್ಕಾರವನ್ನು ಅಧಿಕಾಕ್ಕೇರಲು ಸಹಕಾರ ನೀಡುವಂತೆ ಕೋರಿದರು.
ಇನ್ನು ಕೆಲ ಕಾಲ ತುಂತುರು ಮಳೆಯಲ್ಲೆ ಭಾಷಣ ಮಾಡಿದ ಸಿಎಂ ಮಳೆ ಬರುವ ಮುನ್ಸೂಚನೆ ಕಂಡು ಬಂದ ಹಿನ್ನೆಲೆಯಲ್ಲಿ ಕೆಮ್ಮಣ್ಣು ನಾಲೆ ವೃತ್ತ, ಕೊಲ್ಲಿ ವೃತ್ತದವರೆಗೂ ಹಮ್ಮಿಕೊಂಡಿದ್ದ ರೋಡ್ ಶೋ ಮೊಟಕುಗೊಳಿಸಲಾಯಿತು. ಮದ್ದೂರಿನಲ್ಲಿ ರೋಡ್ ಶೋ ಮುಗಿಸಿ ಬೆಂಗಳೂರಿಗೆ ತೆರಳುವ ವೇಳೆ ಶಿವಪುರದ ಮದ್ದೂರು ಟಿಫಾನೀಸ್ ಹೋಟೆಲ್ ಆವರಣದಲ್ಲಿ ಕಾರಿನಲ್ಲಿ ಕುಳಿತು ಮಸಾಲೆದೋಸೆ, ಮದ್ದೂರು ವಡೆಯನ್ನು ಸವಿದರು. ರೋಡ್ ಶೋ ವೇಳೆ ಬಿಜೆಪಿ ಜಿಲ್ಲಾಧ್ಯಕ್ಷ ಸಿ.ಪಿ.ಉಮೇಶ್, ತಾಲೂಕು ಅಧ್ಯಕ್ಷ ಶಿವದಾಸ್ ಸತೀಶ್, ಚುನಾವಣಾ ವೀಕ್ಷಕರಾದ ಭರತ್ ಭೂಷಣ್ ಮತ್ತಿತರರು ಇದ್ದರು.
ವರದಿ : ಗಿರೀಶ್ ರಾಜ್ ಮಂಡ್ಯ.