ಇದೇ ಮೇ 6ರಂದು ಬ್ರಿಟನ್ ನ ಮುಂದಿನ ರಾಜನಾಗಿ ಕಿಂಗ್ ಚಾರ್ಲ್ಸ್ III ಪ್ರಮಾಣವಚನ ಸ್ವೀಕರಿಸಲಿದ್ದಾರೆ. ಏಳು ದಶಕಗಳ ಕಾಲ ಬ್ರಿಟನ್ನನು ಆಳಿದ ರಾಣಿ ಎಲಿಜಬೆತ್-2 ಕಳೆದ ವರ್ಷ ಸೆಪ್ಟೆಂಬರ್ ನಲ್ಲಿ ನಿಧನರಾಗಿದ್ದಾರೆ. ಈ ಹಿನ್ನೆಲೆಯಲ್ಲಿ ಇದೀಗ ಬ್ರಿಟನ್ನ ಮುಂದಿನ ರಾಜನಾಗಿ ಚಾರ್ಲ್ಸ್ -3 ಅಧಿಕಾರ ವಹಿಸಿಕೊಳ್ಳುತ್ತಿದ್ದಾರೆ.
ಅಧಿಕೃತವಾಗಿ ರಾಜನ ಜವಾಬ್ದಾರಿಯನ್ನ ವಹಿಸಿಕೊಂಡಿದ್ದರೂ, ಮೇ 6 ರಂದು ಸಾಂಪ್ರದಾಯಿಕ ಪಟ್ಟಾಭಿಷೇಕ ನಡೆಯಲಿದೆ. ಈ ಪಟ್ಟಾಭಿಷೇಕ ಮಹೋತ್ಸವವನ್ನ ಅದ್ಧೂರಿಯಾಗಿ ನಡೆಸಲು ಸಕಲ ವ್ಯವಸ್ಥೆ ಮಾಡಲಾಗುತ್ತಿದೆ. ಈ ಪ್ರಮಾಣ ವಚನ ಸ್ವೀಕಾರಕ್ಕೆ ಈಗಾಗಲೇ ಗಣ್ಯರಿಗೆ ಆಹ್ವಾನ ನೀಡಲಾಗಿದೆ.
ಈ ಮಧ್ಯೆ, ಚಾಲ್ಸ್ ಪಟ್ಟಾಭಿಷೇಕಕ್ಕೆ ಸುಮಾರು 100 ಮಿಲಿಯನ್ ಪೌಂಡ್ಗಳಷ್ಟು ವೆಚ್ಚವಾಗಲಿದೆ ಎಂದು ಅಂದಾಜಿಸಲಾಗಿದೆ. ಅಂದರೆ ನಮ್ಮ ಭಾರತೀಯ ಕರೆನ್ಸಿ ಪ್ರಕಾರ 1020 ಕೋಟಿ ರೂಪಾಯಿ. ಆದ್ರೆ, ಈ ಸಂಪೂರ್ಣ ವೆಚ್ಚವನ್ನು ಬ್ರಿಟಿಷ್ ಸರ್ಕಾರ ಭರಿಸಲಿದೆ. ಬ್ರಿಟಿಷ್ ರಾಜಮನೆತನದವರು ತಮ್ಮ ಸ್ವಂತ ಖರ್ಚಿನಲ್ಲಿ ಮದುವೆಗಳನ್ನ ಮಾಡುತ್ತಾರೆ. ಪಟ್ಟಾಭಿಷೇಕದ ವೆಚ್ಚವನ್ನ ಸರಕಾರವೇ ಭರಿಸಲಿದೆ. ಇನ್ನು ಈ ಪಟ್ಟಾಭಿಷೇಕದ ವೆಚ್ಚಕ್ಕೆ ಹೋಲಿಸಿದರೆ ಕಾರ್ಯಕ್ರಮದ ಟಿವಿ ಪ್ರಸಾರ ಹಕ್ಕುಗಳಿಂದ ಬರುವ ಆದಾಯವು ದೊಡ್ಡದಾಗಿದೆ ಎಂದು ವರದಿಯಾಗಿದೆ.
ಲಂಡನ್ನ ವೆಸ್ಟ್ ಮಿನಿಸ್ಟರ್ನ ಅಬ್ಬೆ ಚರ್ಚ್ನಲ್ಲಿ ನಡೆದ ಈ ಪಟ್ಟಾಭಿಷೇಕ ಸಮಾರಂಭವನ್ನ 3.7 ಕೋಟಿ ಜನರು ವೀಕ್ಷಿಸುತ್ತಾರೆ ಎಂದು ಅಂದಾಜಿಸಲಾಗಿದೆ. ಇನ್ನು ಈ ಕಾರ್ಯಕ್ರಮಕ್ಕಾಗಿ 700 ವರ್ಷಗಳ ಐತಿಹಾಸಿಕ ಹಿನ್ನೆಲೆಯುಳ್ಳ ಕುರ್ಚಿಯನ್ನೂ ಸಿದ್ಧಪಡಿಸಲಾಗುತ್ತಿದೆ.
ಅಂದ್ಹಾಗೆ, 1953ರಲ್ಲಿ, ಬ್ರಿಟಿಷ್ ರಾಣಿ ಎಲಿಜಬೆತ್ -11ರ ಪಟ್ಟಾಭಿಷೇಕ ಸಮಾರಂಭವನ್ನ ನಡೆಸಲಾಗಿತ್ತು. ಇದನ್ನ 3 ಲಕ್ಷ ಮಂದಿ ನೇರವಾಗಿ ಕಾರ್ಯಕ್ರಮ ವೀಕ್ಷಿಸಿದ್ದಾರೆ. ಆ ಸಮಯದಲ್ಲಿ, ರಾಣಿಯ ಪಟ್ಟಾಭಿಷೇಕಕ್ಕಾಗಿ 1.5 ಮಿಲಿಯನ್ ಪೌಂಡ್ಗಳನ್ನ ಖರ್ಚು ಮಾಡಲಾಯಿತು. ಇದು ಪ್ರಸ್ತುತ ಕರೆನ್ಸಿಯಲ್ಲಿ ಸುಮಾರು 50 ಮಿಲಿಯನ್ ಪೌಂಡ್ಗಳು. ಅಂದರೆ ಸರಿಸುಮಾರು 528.7 ಕೋಟಿ ರೂಪಾಯಿಗಳಷ್ಟು.