ಬೆಂಗಳೂರು: ಕರ್ನಾಟಕ ವಿಧಾನಸಭೆ ಚುನಾವಣೆಗೆ ಇನ್ನೇನು ಏಳು ದಿನಗಳಷ್ಟೇ ಬಾಕಿ ಇವೆ. ಈ ಹಿನ್ನೆಲೆಯಲ್ಲಿ ಅಂತಿಮ ಹಂತದಲ್ಲಿ ಮತಬೇಟೆಗೆ ಬಿಜೆಪಿ ಭರ್ಜರಿ ಪ್ಲ್ಯಾನ್ ಮಾಡಿಕೊಂಡಿದ್ದು, ಕರ್ನಾಟಕದಲ್ಲಿ ಪ್ರಧಾನಿ ನರೇಂದ್ರ ಮೋದಿ ಮೂರು ದಿನಗಳ ಮೆಗಾ ಟೂರ್ ಹಾಗೂ ರೋಡ್ ಶೋ ನಡೆಸಲಿದ್ದಾರೆ.
ಮೇ 5 ರಿಂದ ಮೇ 7 ರವರೆಗೆ ರಾಜ್ಯದ ವಿವಿಧ ಕ್ಷೇತ್ರಗಳಲ್ಲಿ ಮೋದಿ ರೋಡ್ ಶೋ ಮತ್ತು ಸಾರ್ವಜನಿಕ ಸಭೆಗಳಲ್ಲಿ ಭಾಗಿಯಾಗಲಿದ್ದು, ಅಂತಿಮ ಹಂತದಲ್ಲಿ ಮತದಾರರ ಗಮನ ಸೆಳೆಯಲು ಕಸರತ್ತು ನಡೆಸಲಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ಎಲ್ಲೆಲ್ಲಿ ಪ್ರವಾಸ ನಡೆಸಲಿದ್ದಾರೆ ಎಂಬುದರ ವಿವರ ಇಲ್ಲಿದೆ.
ಚುನಾವಣಾ ದಿನಾಂಕ ಘೋಷಣೆಯಾದ ಬಳಿಕ ಮೇ 5 ರಂದು ರಾಜ್ಯಕ್ಕೆ ಪ್ರಧಾನಿ ನರೇಂದ್ರ ಮೋದಿ ಮೂರನೇ ಬಾರಿ ಎಂಟ್ರಿ ಕೊಡಲಿದ್ದಾರೆ. ಮೇ 5 ರಂದು ಬಳ್ಳಾರಿ ಮತ್ತು ತುಮಕೂರುಗಳಲ್ಲಿ ಬೃಹತ್ ಸಾರ್ವಜನಿಕ ಸಭೆಗಳಲ್ಲಿ ಮೋದಿ ಭಾಗಿಯಾಗಲಿದ್ದಾರೆ. ಅಂದು ರಾತ್ರಿ ಬೆಂಗಳೂರಿನಲ್ಲಿ ಪ್ರಧಾನಿ ವಾಸ್ತವ್ಯ ಹೂಡಲಿದ್ದಾರೆ.
ಮೇ 6 ರಂದು ಬೆಂಗಳೂರಿನಲ್ಲಿ ಐತಿಹಾಸಿಕ ಮೆಗಾ ರೋಡ್ ಶೋವನ್ನು ಮೋದಿ ನಡೆಸಲಿದ್ದಾರೆ. ಬೆಳಗ್ಗೆ 10 ರಿಂದ ಮಧ್ಯಾಹ್ನ 1 ಗಂಟೆವರೆಗೆ ಸಿವಿ ರಾಮನ್ ನಗರ ಕ್ಷೇತ್ರದಿಂದ ಬ್ರಿಗೇಡ್ ರಸ್ತೆವರೆಗೆ ಮೊದಲ ಮೆಗಾ ರೋಡ್ ಶೋ ನಡೆಯಲಿದೆ. ಮೂರು ಗಂಟೆಗಳ ಕಾಲ ಸುಮಾರು 8 ಕಿಮೀ ವರೆಗೆ ಪ್ರಧಾನಿ ನರೇಂದ್ರ ಮೋದಿ ರೋಡ್ ಶೋ ನಡೆಸಲಿದ್ದಾರೆ.
ಮಧ್ಯಾಹ್ನ 3 ಗಂಟೆಯಿಂದ ರಾತ್ರಿ 8.30 ರ ತನಕ ಪ್ರಧಾನಿ ಮೋದಿ ಎರಡನೇ ಮೆಗಾ ರೋಡ್ ಶೋ ನಡೆಯಲಿದೆ. ಕೋಣನಕುಂಟೆ ಬಳಿಯ ಬ್ರಿಗೇಡ್ ಮಿಲೇನಿಯಂನಿಂದ ಸ್ಯಾಂಕಿ ಕೆರೆವರೆಗೆ 29.4 ಕಿ.ಮೀ ವರೆಗೆ ಎರಡನೇ ಮೆಗಾ ರೋಡ್ ಶೋದಲ್ಲಿ ಮೋದಿ ಭಾಗಿಯಾಗಲಿದ್ದಾರೆ. ಎರಡನೇ ದಿನವೂ ಬೆಂಗಳೂರಿನ ರಾಜಭವನದಲ್ಲಿ ಮೋದಿ ವಾಸ್ತವ್ಯ ಹೂಡಲಿದ್ದಾರೆ.
ಮೇ 7 ರಂದು ಬಾದಾಮಿ, ಹಾವೇರಿ, ಶಿವಮೊಗ್ಗ ಗ್ರಾಮೀಣ ಹಾಗೂ ನಂಜನಗೂಡು ಕ್ಷೇತ್ರಗಳಲ್ಲಿ ನರೇಂದ್ರ ಮೋದಿ ಪ್ರವಾಸ ನಡೆಸಲಿದ್ದಾರೆ. ಈ ನಾಲ್ಕೂ ಕ್ಷೇತ್ರಗಳಲ್ಲಿ ಬೃಹತ್ ಸಾರ್ವಜನಿಕ ಸಭೆಗಳಲ್ಲಿ ಮೋದಿ ಭಾಷಣ ಮಾಡಲಿದ್ದಾರೆ. ಬಳಿಕ ಅದೇ ದಿನ ಸಂಜೆ ನಂಜನಗೂಡಿನ ಶ್ರೀಕಂಠೇಶ್ವರ ದೇವಸ್ಥಾನದಲ್ಲಿ ವಿಶೇಷ ಪೂಜೆ ಮಾಡಿ ಮೈಸೂರು ಏರ್ಪೋರ್ಟ್ ಮೂಲಕ ದೆಹಲಿಗೆ ಪ್ರಧಾನಿ ಮೋದಿ ವಾಪಸ್ ಆಗಲಿದ್ದಾರೆ.