ಜೈಪುರ: ಇತ್ತೀಚಿನ ದಿನಗಳಲ್ಲಿ ಉದ್ಯೋಗಕ್ಕಾಗಿ ವಲಹೆ ಹೋಗುವುದು ಸಹಜ. ಹಾಗಾಗಿ ವಲಸಿಗರು ಬಾಡಿಗೆ ಮನೆ ಪಡೆಯುವ ಮುನ್ನ ಎಚ್ಚರ ವಹಿಸಬೇಕಿದೆ. ವಸತಿ ಸೌಲಭ್ಯಕ್ಕಿಂಲೂ ಹೆಚ್ಚಾಗಿ ನಾವು ಯಾರದ್ದೊ ಕ್ಯಾಮೆರಾ (Camera) ಕಣ್ಣಿಗೆ ಸಿಗದೇ ಸುರಕ್ಷಿತವಾಗಿದ್ದೇವಾ ಎಂಬುದನ್ನ ಗಮನದಲ್ಲಿಟ್ಟುಕೊಳ್ಳಬೇಕಿದೆ. ಏಕೆಂದರೆ ರಾಜಸ್ಥಾನದ (Rajasthan) ಉದಯಪುರದಲ್ಲಿ ಆಘಾತಕಾರಿ ಘಟನೆಯೊಂದು ಬೆಳಕಿಗೆ ಬಂದಿದೆ.
ಈ ನಗರದಲ್ಲಿ ಯುವತಿಯರು ವಾಸವಿದ್ದ ಬಾಡಿಗೆ ಫ್ಲ್ಯಾಟ್ನಲ್ಲಿ (Rent Flat) ಸ್ಪೈ ಕ್ಯಾಮೆರಾಗಳು ಪತ್ತೆಯಾಗಿವೆ. ಈ ಕ್ಯಾಮೆರಾ ಗಳನ್ನು ಸ್ನಾನಗೃಹ, ಮಲಗುವ ಕೋಣೆಗಳು ಮತ್ತು ಇತರ ಸ್ಥಳಗಳಲ್ಲಿ ಅಳವಡಿಸಲಾಗಿತ್ತು ಎಂಬುದು ತಿಳಿದುಬಂದಿದೆ. ಗ್ರಾಹಕರಿಗೆ ಮನೆಗಳನ್ನ ಬಾಡಿಗೆ ನೀಡುವ ಮುನ್ನ ಮಾಲೀಕರೇ ಅಳವಡಿಸಿದ್ದರು ಎಂಬುದು ಗಮನಾರ್ಹ. ಹೌದು.. ರಾಜಸ್ಥಾನದ ಉದಯಪುರದ ಪ್ರತಾಪನಗರ ಪೊಲೀಸ್ ಠಾಣೆಯಲ್ಲಿ ಈ ಸಂಬಂಧ ಕೇಸ್ ದಾಖಲಾಗಿದೆ.
ಉದಯಪುರ ವಿಭಾಗದ ಅತಿದೊಡ್ಡ ಮೋಹನ್ಲಾಲ್ ಸುಖದಿಯಾ ವಿಶ್ವವಿದ್ಯಾಲಯವು ಈ ಪೊಲೀಸ್ ಠಾಣೆ ವೃತ್ತದಲ್ಲಿದೆ ಎಂಬುದು ಸಹ ಗಮನಿಸಬೇಕಾದ ಅಂಶ. ಬೋಹ್ರಾ ಗಣೇಶ್ ಪ್ರದೇಶವು ಈ ವಿಶ್ವವಿದ್ಯಾಲಯದ ಸಮೀಪದಲ್ಲಿದೆ. ಈ ಪ್ರದೇಶದಲ್ಲಿ ನೂರಾರು ಯುವಕ-ಯುವತಿಯರು ಬಾಡಿಗೆಗೆ ಕೊಠಡಿ ಅಥವಾ ಫ್ಲ್ಯಾಟ್ಗಳನ್ನು ತೆಗೆದುಕೊಂಡು ವಾಸಿಸುತ್ತಿದ್ದಾರೆ ಎಂದು ತಿಳಿದುಬಂದಿದೆ. ಈ ಹಿನ್ನೆಲೆ ಈ ಪ್ರಕರಣ ಸಂಬಂಧ ರಾಜ್ಸಮಂದ್ನ ನಾಥದ್ವಾರ ನಿವಾಸಿ ರಾಜೇಂದ್ರ ಸೋನಿ ಎಂಬಾತನನ್ನು ಪೊಲೀಸರು ಬಂಧಿಸಿದ್ದಾರೆ.
ಸ್ಪೈ ಕ್ಯಾಮೆರಾಗಳು ಪತ್ತೆಯಾಗಿದ್ದು ಹೇಗೆ?
ಈ ಘಟನೆ ಸಂಬಂಧ ಬೋಹ್ರಾ ಗಣೇಶ್ ಜೀ ಮಂದಿರ ರಸ್ತೆಯಲ್ಲಿರುವ ಪಾರ್ಥ್ ಕಾಂಪ್ಲೆಕ್ಸ್ನಲ್ಲಿರುವ ಫ್ಲ್ಯಾಟ್ ಸಂಖ್ಯೆ 401 ಅನ್ನು ರಾಜೇಂದ್ರ ಅಲಿಯಾಸ್ ರಾಜ್ ಸೋನಿ ಅವರಿಂದ ಬಾಡಿಗೆಗೆ ಪಡೆದಿದ್ದೇವೆ ವಿದ್ಯಾರ್ಥಿನಿಯರು ಪೊಲೀಸರಿಗೆ ದೂರು ನೀಡಿದ್ದರು. ಕೆಲ ದಿನಗಳ ಹಿಂದೆ ಆಕೆ ಮನೆಗೆ ಹೋಗಿದ್ದ ವೇಳೆ ಫ್ಲ್ಯಾಟ್ ಮಾಲೀಕರು ರಿಪೇರಿ ನೆಪದಲ್ಲಿ ಫ್ಲಾಟ್ ತೆರೆದಿದ್ದರು.
ಫ್ಲಾಟ್ನ ಕೀ ಕೂಡ ಅವರ ಬಳಿ ಇತ್ತು. ಆ ವೇಳೆ ಫ್ಲ್ಯಾಟ್ನಲ್ಲಿ ಯುವತಿಯರು ಇಲ್ಲದ ಲಾಭ ಪಡೆದು ಬಾತ್ ರೂಂ, ಬೆಡ್ ರೂಂನಲ್ಲಿ ಎಲೆಕ್ಟ್ರಾನಿಕ್ ಉಪಕರಣಗಳಲ್ಲಿ ಸ್ಪೈ ಕ್ಯಾಮೆರಾಗಳನ್ನು (ಚಿಕ್ಕ ಗಾತ್ರದ ಕ್ಯಾಮೆರಾ) ಅಳವಡಿಸಿದ್ದರು. ಇನ್ನು, ಪ್ಲ್ಯಾಟ್ನಲ್ಲಿ ಶಾರ್ಟ್ ಸರ್ಕ್ಯೂಟ್ ಆಗಿದ್ದು, ರಿಪೇರಿ ಮಾಡುವಾಗ, ಸ್ಪೈ ಕ್ಯಾಮೆರಾಗಳನ್ನು ಅಳವಡಿಸಲಾಗಿರುವ ಬಗ್ಗೆ ವಿದ್ಯಾರ್ಥಿನಿಯರ ಅರಿವಿಗೆ ಬಂದಿದೆ ಎಂದು ದೂರಿನಲ್ಲಿ ತಿಳಿಸಿದ್ದಾರೆ.
ಈ ಸಂಬಂಧ ಕೇಸ್ ದಾಖಲಿಸಿಕೊಂಡು ತನಿಖೆ ಆರಂಭಿಸಿದ್ದ ಪೊಲೀಸರು, ಆರೋಪಿಯನ್ನು ಬಂಧಿಸಿದ್ದರು. ಬಳಿಕ ವಿಚಾರಣೆ ನಡೆಸಿದಾಗ ಆರೋಪಿಯೇ ಕಂಪ್ಯೂಟರ್ ಮತ್ತು ಸಿಸಿಟಿವಿ ಕ್ಯಾಮೆರಾ ವ್ಯವಹಾರ ನಡೆಸುತ್ತಿದ್ದದ್ದು ಕಂಡುಬಂದಿದೆ. ಬಳಿಕ ತಾನೇ ಸ್ಪೈ ಕ್ಯಾಮೆರಾಗಳನ್ನ ಬಾತ್ ರೂಮ್, ಬೆಡ್ ರೂಮ್ ನಲ್ಲಿ ಅಳವಡಿಸಿ, ವಿದ್ಯಾರ್ಥಿನಿಯರ ಅಶ್ಲೀಲ ದೃಶ್ಯಗಳನ್ನ ನೋಡುತ್ತಿದ್ದ ಎಂಬುದನ್ನು ಒಪ್ಪಿಕೊಂಡಿದ್ದಾನೆ. ಸದ್ಯ ಆರೋಪಿಯ ಮೊಬೈಲ್ ವಶಕ್ಕೆ ಪಡೆದಿರುವ ಪೊಲೀಸರು ತನಿಖೆ ಮುಂದುವರಿಸಿದ್ದಾರೆ.