ಬೆಂಗಳೂರು: ಕಾಂಗ್ರೆಸ್ ಪ್ರಣಾಳಿಕೆಯಲ್ಲಿ ಬಜರಂಗದಳ ನಿಷೇಧಿಸುವ ವಿಚಾರ ಪ್ರಸ್ತಾಪವನ್ನು ಖಂಡಿಸಿ ಬೆಂಗಳೂರಿನ ವಿವಿಧ ಆಂಜನೇಯ ದೇವಸ್ಥಾನ ಗಳಲ್ಲಿ ಹನುಮಾನ್ ಚಾಲೀಸಾ ಪಠಣೆ ನಡೆಯಿತು. ಮೈಸೂರು ರಸ್ತೆಯ ಗಾಳಿ ಆಂಜನೇಯ ದೇವಾಲಯದಲ್ಲಿ ಹಿಂದೂ ಪರ ಸಂಘಟನೆ ಕಾರ್ಯಕರ್ತರು ಹನುಮಾನ್ ಚಾಲಿಸ ಪಠಣೆ ಮಾಡಿದ್ದು, ಈ ವೇಳೆ ವಾಗ್ಮಿ ಚಕ್ರವರ್ತಿ ಸೂಲಿಬೆಲೆ, ಬಿಗ್ ಬಾಸ್ ಖ್ಯಾತಿಯ ಸಾಮಾಜಿಕ ಹೋರಾಟಗಾರ ಪ್ರಶಾಂತ್ ಸಂಬರಗಿ ಮತ್ತಿತರರು ಭಾಗಿಯಾಗಿದ್ದರು.
ಈ ವೇಳೆ ದೇವಾಲಯದ ಒಳಗೆ ರಾಜಕೀಯ ಮಾಡಬಾರದು ಎಂಬ ಉದ್ದೇಶದಿಂದ ದೇವಸ್ಥಾನದ ಒಳಾಂಗಣದಲ್ಲಿ ಅವಕಾಶ ನೀಡದೆ ಹೊರಾಂಗಣದಲ್ಲಿ ಪಠಣೆಗೆ ಅವಕಾಶ ನೀಡಲಾಯಿತು. ಹನುಮಾನ್ ಚಾಲೀಸಾ ಪಠಿಸಬೇಕೆಂದರೆ ವಿಡಿಯೋ ಮಾಡಬೇಡಿ, ಬೇಕಿದ್ದರೆ ಭಕ್ತಿಯಿಂದ ಹನುಮಾನ್ ಚಾಲೀಸಾ ಪಠಿಸಿ ಎಂದು ಆಡಳಿತ ಮಂಡಳಿ ಸೂಚನೆ ನೀಡಿದೆ. ಹೀಗಾಗಿ ದೇವಸ್ಥಾನದ ಹೊರಗಿರುವ ವಿಗ್ರಹದ ಬಳಿ ಹನುಮಾನ್ ಚಾಲೀಸಾ ಪಠಣೆ ನಡೆಸಲಾಯಿತು.