ಬೆಂಗಳೂರು: ಕರ್ನಾಟಕ ವಿಧಾನಸಭಾ ಚುನಾವಣೆ (Assembly Election) ಹಿನ್ನೆಲೆ ಬಿಜೆಪಿ (BJP) ಪರವಾಗಿ ಭರ್ಜರಿ ಪ್ರಚಾರದಲ್ಲಿ ತೊಡಗಿರುವ ಪ್ರಧಾನಿ ನರೇಂದ್ರ ಮೋದಿ (Narendra Modi) ರಾಜ್ಯಾದ್ಯಂತ ರೋಡ್ ಶೋಗಳನ್ನು (Road Show) ನಡೆಸುತ್ತಿದ್ದಾರೆ. ಇದೀಗ ಶನಿವಾರ ಹಾಗೂ ಭಾನುವಾರ ರಾಜಧಾನಿ ಬೆಂಗಳೂರಿನಲ್ಲಿ (Bengaluru) ನಡೆಯಬೇಕಿದ್ದ ರೋಡ್ ಶೋನಲ್ಲಿ ಮತ್ತೆ ಬದಲಾವಣೆ ಮಾಡಲಾಗಿದೆ.
ಮೋದಿ ರೋಡ್ ಶೋ ನಡೆಯಲಿರುವ ದಿನ ಪ್ರಮುಖ ರಸ್ತೆಗಳನ್ನು ಬಂದ್ ಮಾಡುವುದಾಗಿ ಪೊಲೀಸರು ಸೂಚನೆ ನೀಡಿದ್ದಾರೆ. ಆದರೆ ಭಾನುವಾರ ನೀಟ್ ಪರೀಕ್ಷೆಯೂ ನಡೆಯಲಿದ್ದು ಅಂದು ಕೂಡಾ ಮೋದಿ ರೋಡ್ ಶೋ ನಿಗದಿಪಡಿಸಲಾಗಿದೆ. ಇದರಿಂದ ಅಭ್ಯರ್ಥಿಗಳು ಹಾಗೂ ಪೋಷಕರು ಪರೀಕ್ಷಾ ಕೇಂದ್ರಗಳಿಗೆ ಹೋಗೋದು ಹೇಗೆ ಎಂಬ ಆತಂಕದಲ್ಲಿದ್ದಾರೆ. ಹೀಗಾಗಿ ಮೋದಿ ರೋಡ್ ಶೋನಲ್ಲಿ ಕೆಲವು ಬದಲಾವಣೆಗಳನ್ನು ಮಾಡಲಾಗಿದೆ.
ಶನಿವಾರ ಮತ್ತು ಭಾನುವಾರಗಳ ರೋಡ್ ಶೋಗಳನ್ನು ಅದಲು ಬದಲು ಮಾಡಲಾಗಿದೆ. ಭಾನುವಾರ ಬೆಳಗ್ಗೆ ನಿಗದಿಯಾಗಿದ್ದ ರೋಡ್ ಶೋವನ್ನು ಶನಿವಾರಕ್ಕೆ ಶಿಫ್ಟ್ ಮಾಡಲಾಗಿದ್ದು, ಶನಿವಾರ ಬೆಳಗ್ಗೆ ನಿಗದಿಯಾಗಿದ್ದ ರೋಡ್ ಶೋ ಭಾನುವಾರಕ್ಕೆ ಶಿಫ್ಟ್ ಮಾಡಲಾಗಿದೆ. ಜೊತೆಗೆ ರೋಡ್ ಶೋ ಸಾಗುವ ದೂರವನ್ನೂ ಕಡಿತ ಮಾಡಲಾಗಿದೆ.
ಶನಿವಾರ ಬೆಳಗ್ಗೆ 10 ಗಂಟೆಯಿಂದ 12:30 ರವರೆಗೆ ರೋಡ್ ಶೋ ನಡೆಯಲಿದೆ. ಇದು ಜೆಪಿ ನಗರ ಬ್ರಿಗೇಡ್ ಮಿಲೇನಿಯಂನಿಂದ ಮಲ್ಲೇಶ್ವರಂ ಸರ್ಕಲ್ ಮಾರಮ್ಮ ಟೆಂಪಲ್ ವರೆಗೆ ನಡೆಯಲಿದೆ. ಭಾನುವಾರ ಬೆಳಗ್ಗೆ 10 ಗಂಟೆಯಿಂದ 11:30 ರವರೆಗೆ ರೋಡ್ ಶೋ ನಡೆಯಲಿದ್ದು, ಇದು ಸುರಂಜನ್ ದಾಸ್ ಸರ್ಕಲ್ ನಿಂದ ಟ್ರಿನಿಟಿ ಸರ್ಕಲ್ ವರೆಗೆ ಸಾಗಲಿದೆ. ಮಾತ್ರವಲ್ಲದೇ ಭಾನುವಾರ ನಡೆಯುವ ರೋಡ್ ಶೋದಲ್ಲಿ 4 ಕಿ.ಮೀ ಕಡಿತ ಮಾಡಲಾಗಿದೆ.
ಈ ಬಾರಿ ಮೋದಿ ಬೆಂಗಳೂರಿನ 18 ವಿಧಾನಸಭಾ ಕ್ಷೇತ್ರಗಳಲ್ಲಿ ರೋಡ್ ಶೋ ನಡೆಸಲಿದ್ದಾರೆ. ಮೋದಿ ರೋಡ್ ಶೋ ಸಾಗುವ ಮಾರ್ಗದಲ್ಲಿ ಬ್ಯಾರಿಕೇಡ್ಗಳನ್ನು ಅಳವಡಿಸಲಾಗಿದೆ. ಸುಮಾರು 37 ಕಿ.ಮೀ ರೋಡ್ ಶೋ ನಡೆಯಲಿದ್ದು, ದಾರಿಯುದ್ದಕ್ಕೂ ಬಿಗಿ ಭದ್ರತೆಯನ್ನು ಮಾಡಲಾಗಿದೆ. ಬಿಬಿಎಂಪಿ ಸಿಬ್ಬಂದಿಯಿಂದ ಸ್ವಚ್ಛತಾ ಕಾರ್ಯ ನಡೆಯುತ್ತಿದ್ದು, 3 ದಿನ ಫುಟ್ಪಾತ್ ವ್ಯಾಪಾರಕ್ಕೂ ಬ್ರೇಕ್ ಬೀಳುವ ಸಾದ್ಯತೆಯಿದೆ. ಬೆಂಗಳೂರು ದಕ್ಷಿಣ ಹಾಗೂ ಕೇಂದ್ರ ಭಾಗದಲ್ಲಿ ಅತಿ ಹೆಚ್ಚು ನೀಟ್ ಪರೀಕ್ಷೆ ಕೇಂದ್ರಗಳು ಇದ್ದು, ಭಾನುವಾರ ಸಾವಿರಾರು ಅಭ್ಯರ್ಥಿಗಳು ಪರೀಕ್ಷೆ ಬರೆಯಲಿದ್ದಾರೆ.