ಧರ್ಮಸ್ಥಳ : ಶ್ರೀ ಕ್ಷೇತ್ರ ಧರ್ಮಸ್ಥಳದಲ್ಲಿ 51ನೇ ವರ್ಷದ ಉಚಿತ ಸಾಮೂಹಿಕ ವಿವಾಹದ ಸಂಭ್ರಮ, ಸಡಗರದಿಂದ ನಡೆಯಿತು. ಈ ಬಾರಿ ವಿಶೇಷವಾಗಿ 52 ಜೋಡಿಗಳು ಅಂತರ್ಜಾತಿ ವಿವಾಹವಾಗಿದ್ದಾರೆ.
ಮೇ.3ರ ಸಂಜೆ 6.40 ರ ಗೋಧೂಳಿ ಲಗ್ನ ಸುಮುಹೂರ್ತದಲ್ಲಿ ದೇವಾಲಯದ ಸಮೀಪದ ಅಮೃತವರ್ಷಿಣಿ ಸಭಾಭವನದಲ್ಲಿ 201 ಜೋಡಿ ವಧೂ-ವರರು ದಾಂಪತ್ಯ ಜೀವನಕ್ಕೆ ಪದಾರ್ಪಣೆ ಮಾಡಿದರು.
ಮಂಗಳವಾರ ಧರ್ಮಸ್ಥಳ ಧರ್ಮಾಧಿಕಾರಿ ಡಾ.ಡಿ.ವೀರೇಂದ್ರ ಹೆಗ್ಗಡೆ ಮತ್ತು ಹೇಮಾವತಿ ಹೆಗ್ಗಡೆ ಅವರು ಬೀಡಿನಲ್ಲಿ(ಡಾ.ಹೆಗ್ಗಡೆ ಅವರ ನಿವಾಸದಲ್ಲಿ) ವಧುವಿಗೆ ಸೀರೆ ಮತ್ತು ರವಕೆ ಹಾಗೂ ವರನಿಗೆ ಧೋತಿ, ಶಾಲು ವಿತರಿಸಿದರು. ಬುಧವಾರ ಸಂಜೆ ಭವ್ಯ ಮೆರವಣಿಗೆಯಲ್ಲಿ ವಧು- ವರರು ದೇವಸ್ಥಾನಕ್ಕೆ ಪ್ರದಕ್ಷಿಣೆ ಬಂದು ಅಮೃತವರ್ಷಿಣಿ ಸಭಾಭವನಕ್ಕೆ ತೆರಳಿದರು.
ಧರ್ಮಾಧಿಕಾರಿ ಡಾ.ಡಿ.ವೀರೇಂದ್ರ ಹೆಗ್ಗಡೆ, ಹೇಮಾವತಿ ಹೆಗ್ಗಡೆ, ಡಿ.ಸುರೇಂದ್ರ ಕುಮಾರ್, ಹರ್ಷೇಂದ್ರ ಕುಮಾರ್, ಅನಿತಾ ಸುರೇಂದ್ರ ಕುಮಾರ್, ಸುಪ್ರಿಯ ಹರ್ಷೇಂದ್ರ ಕುಮಾರ್, ಶ್ರದ್ದಾ ಅಮಿತ್, ಶ್ರುತಾಜಿತೇಶ್, ಎಂಎಲ್ಸಿ ಪ್ರತಾಪಸಿಂಹ ನಾಯಕ್, ಹೆಗ್ಗಡೆ ಕುಟುಂಬಸ್ಥರು ಮತ್ತು ಅತಿಥಿಗಳು ಮಂಗಲಸೂತ್ರವನ್ನು ವಿತರಿಸಿದರು. 6.40 ರ ಗೋಧೂಳಿ ಲಗ್ನ ಸುಮುಹೂರ್ತದಲ್ಲಿ ವೇದ, ಮಂತ್ರ ಘೋಷ ಪಠಣದೊಂದಿಗೆ ವರನು ವಧುವಿಗೆ ಮಂಗಲಸೂತ್ರ ಧಾರಣೆ ಮಾಡಿ, ಆಯಾ ಜಾತಿ ಸಂಪ್ರದಾಯದಂತೆ ಮದುವೆಯ ಧಾರ್ಮಿಕ ವಿಧಿ- ವಿಧಾನಗಳನ್ನು ನಡೆಸಲಾಯಿತು.
ಯಾವ ಊರಿನಿಂದ ಎಷ್ಟು ಜೋಡಿ ಭಾಗಿ?
ಬೆಳ್ತಂಗಡಿ ತಾಲೂಕಿನ 5, ಮಂಗಳೂರು 5, ಪುತ್ತೂರು 6, ಉಡುಪಿ ಜಿಲ್ಲೆಯಿಂದ 24, ಚಿಕ್ಕ ಮಗಳೂರು 14, ಶಿವಮೊಗ್ಗ 16, ಹಾಸನ 11, ಬೆಂಗಳೂರು 10, ಮೈಸೂರು 13, ಹಾವೇರಿ 6, ಕೊಡಗು 7, ದಾವಣಗೆರೆ 9, ಧಾರವಾಡ 7, ಉತ್ತರಕನ್ನಡ 17, ಚಿತ್ರದುರ್ಗ 3, ಮಂಡ್ಯ 9, ರಾಮನಗರ 5, ಚಾಮರಾಜನಗರ 7, ಬಳ್ಳಾರಿ 3, ಬಾಗಲಕೋಟೆ 3, ತುಮಕೂರು 10, ಬೆಳಗಾವಿ 3, ಗದಗ 3, ಕೋಲಾರ ಜಿಲ್ಲೆಯ 1 ಜೋಡಿ ಹಾಗೂ ಕೇರಳ ರಾಜ್ಯದ 1 ಹಾಗೂ ಆಂಧ್ರ ಪ್ರದೇಶದ 3 ಜೋಡಿ ಸಹಿತ 201 ಜೋಡಿ ವಿವಾಹ ನೆರವೇರಿತು.
ಯಾವ ಜಾತಿ ಎಷ್ಟು ಮದುವೆ?
ಅಂತರ್ಜಾತಿ ವಿವಾಹ-52, ಪರಿಶಿಷ್ಟ ಜಾತಿ-52, ಕುರುಬ-9, ವೀರಶೈವರು-9, ಪರಿಶಿಷ್ಟ ವರ್ಗ-11 ಉಳಿದ 68 ಜತೆ ಇತರ ಜಾತಿಗೆ ಸೇರಿದವರು.
‘ಮದುವೆಯಾಗಿ ಬಂದ ಗೃಹಿಣಿ ಭಾಗ್ಯಲಕ್ಷಿತ್ರ್ಮಯಾಗಿ ಮನೆಯನ್ನೇ ಬೆಳಗಿ ಸ್ವರ್ಗವನ್ನಾಗಿ ಮಾಡುತ್ತಾಳೆ. ಪತಿ-ಪತ್ನಿ ಪರಸ್ಪರ ಹೊಂದಾಣಿಕೆ, ತಾಳ್ಮೆ ಮತ್ತು ಸಹನೆಯಿಂದ ಸುಖ- ಕಷ್ಟವನ್ನು ಸಮಾನವಾಗಿ ಸ್ವೀಕರಿಸಿ ಅನುಭವಿಸಿ, ಸಾರ್ಥಕ ದಾಂಪತ್ಯ ಜೀವನ ನಡೆಸಬೇಕು. ಆಗ ಮನೆಯೇ ಮಂದಿರವಾಗುತ್ತದೆ. ಸ್ವರ್ಗ ಸುಖವನ್ನು ಅನುಭವಿಸಬಹುದು” ಎಂದು ಧರ್ಮಾಧಿಕಾರಿ ಡಾ.ಡಿ.ವೀರೇಂದ್ರ ಹೆಗ್ಗಡೆ ನೂತನ ದಂಪತಿಗಳಿಗೆ ಕಿವಿಮಾತು ಹೇಳಿ ಶುಭ ಹಾರೈಸಿದರು.