ಮಂಡ್ಯ: ಮುಸ್ಲಿಂ ಸಮುದಾಯಕ್ಕೆ ಮೀಸಲಾತಿ (Muslim Reservation) ನೀಡಿದ್ದು ನಾನೇ ಎಂದು ಜೆಡಿಎಸ್ ವರಿಷ್ಠ, ಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌಡ (HD Deve Gowda) ಹೇಳಿದರು. ಜಿಲ್ಲೆಯ ಕೆ.ಆರ್.ಪೇಟೆಯಲ್ಲಿ ಮಾತನಾಡಿದ ಅವರು, ಮಂಡ್ಯ ಜಿಲ್ಲೆ ಕೆ.ಆರ್.ಪೇಟೆಗೆ ನೀರು ತಂದು ಕೊಟ್ಟಿದ್ದು ಯಾರು ಎಂದು ಪ್ರಶ್ನಿಸಿದರು. ಅಲ್ಲದೆ, ಜೆಡಿಎಸ್ (JDS) ಮುಗಿದು ಹೋಗಿದೆ ಅಂತಾ ಹೇಳಿದವರಿಗೂ ಟಾಂಗ್ ಕೊಟ್ಟರು. ಕುಮಾರಸ್ವಾಮಿ ಮುಖ್ಯಮಂತ್ರಿ ಆಗಲು ಮಂಡ್ಯದ ಎಲ್ಲಾ ಕ್ಷೇತ್ರದಲ್ಲಿ ಜೆಡಿಎಸ್ ಗೆಲ್ಲಿಸುವಂತೆ ಮನವಿ ಮಾಡಿದರು.
ಕಾಶ್ಮೀರಕ್ಕೆ ಹೋಗಬಾರದು ಎಂದು ಹೇಳಿದ್ದರೂ ನಾನು 3 ಬಾರಿ ಹೋಗಿದ್ದೆ. ಆದರೆ ನನ್ನನ್ನು ಯಾವ ಮುಸ್ಲಿಮರೂ ಸಾಯಿಸಲಿಲ್ಲ. ಮುಸ್ಲಿಂ ಬಾಂಧವರು ಯಾವಾಗಲೂ ನನ್ನ ಜೊತೆಯೇ ಇದ್ದಾರೆ ಎಂದು ದೇವೇಗೌಡ ಹೇಳಿದರು. ಬಿಜೆಪಿಯ ಕೆಸಿ ನಾರಾಯಣಗೌಡ ಅವರಿಗೆ ವಲಸೆ ರಾಜಕಾರಣಿ ಎಂದು ಟಾಂಗ್ ಕೊಟ್ಟ ದಳಪತಿ, ಜೆಡಿಎಸ್ ಮುಗಿದೆ ಹೋಯ್ತು ಅಂತ ಇತ್ತೀಚೆಗೆ ಒಬ್ಬರು ಹೇಳುತ್ತಿದ್ದರು. ಅವರ ಮಾತನ್ನ ಕೇಳಿದರೆ ನನ್ನ ರಕ್ತ ಕುದಿಯುತ್ತದೆ. ಏನು ಜೆಡಿಎಸ್ ಮುಗಿದೆ ಹೋಯಿತೇ? ನನ್ನ ಮಂಡ್ಯ ಜಿಲ್ಲೆಯಲ್ಲಿ 7 ಸ್ಥಾನದಲ್ಲಿ ಜೆಡಿಎಸ್ ಅಭ್ಯರ್ಥಿ ಗೆಲ್ಲಲೇಬೇಕು ಕುಮಾರಣ್ಣ ಮುಖ್ಯಮಂತ್ರಿ ಆಗಲೇ ಬೇಕು ಎಂದರು.
ವೇದಿಕೆ ಮೇಲೆ ಕುಮಾರಸ್ವಾಮಿ ಯಾಕೆ ಮುಖ್ಯಮಂತ್ರಿ ಆಗಬೇಕೆಂದು ವಿವರಣೆ ನೀಡಿದ ದೇವೆಗೌಡರು, ಹಾಸನಕ್ಕೆ ಸ್ವರೂಪ್ ಗೌಡಗೆ ಟಿಕೆಟ್ ನೀಡಿದ ವಿಚಾರವನ್ನ ಸಹ ಪ್ರಸ್ಥಾಪಿಸಿದರು. ಇದೇ ವೇಳೆ, ಜೆಡಿಎಸ್ ಕಾರ್ಯಕರ್ತರಿಗೆ ಕೈ ಮುಗಿದು ದೇವೆಗೌಡರು, ಅಭ್ಯರ್ಥಿ ಹೆಚ್.ಟಿ ಮಂಜು ಪರ ಮತ ಹಾಕುವಂತೆ ಮನವಿ ಮಾಡಿದರು.
ಕೆ ಆರ್ ಪೇಟೆಯ ಜೆಡಿಎಸ್ ಬೃಹತ್ ಸಮಾವೇಶದಲ್ಲಿ ಹೆಚ್.ಡಿ ದೇವೆಗೌಡರ ಅಬ್ಬರದ ಭಾಷಣ ಕೇಳಿದ ಕಾರ್ಯಕರ್ತರು ಫುಲ್ ಖಷ್ ಆಗಿದ್ದಾರೆ. ದಳಪತಿಯ ಪ್ರತಿ ಮಾತಿಗೂ ಶಿಳ್ಳೆ ಚಪ್ಪಾಳೆ ಹೊಡೆದ ಕಾರ್ಯಕರ್ತರು ಕುಣಿದಾಡಿದರು.