ನವದೆಹಲಿ: ಬಂಗಾಳಕೊಲ್ಲಿಯಲ್ಲಿ ವಾಯುಭಾರ ಕುಸಿತ ಉಂಟಾಗಿದ್ದು, ಮೇ 8ರಿಂದ 11ರ ನಡುವೆ ಪೂರ್ವ ಕರಾವಳಿಗೆ ಮೋಚಾ ಚಂಡಮಾರುತ ಅಪ್ಪಳಿಸುವ ಸಾಧ್ಯತೆ ಇದೆ. ಕರ್ನಾಟಕದಲ್ಲಿ ವಿಧಾನಸಭಾ ಚುನಾವಣೆಗೆ ಮೇ 10ರಂದು ಮತದಾನ ನಡೆಯಲಿದ್ದು, ಅದಕ್ಕೆ ಮಳೆ ತೊಂದರೆ ಕೊಡುವ ಆತಂಕ ಎದುರಾಗಿದೆ.
ಬಂಗಾಳ ಕೊಲ್ಲಿಯ (Bay of Bengal)ಆಗ್ನೇಯ ದಿಕ್ಕಿನಲ್ಲಿ ಚಂಡಮಾರುತವೊಂದು ರೂಪುಗೊಳ್ಳುವ ಲಕ್ಷಣ ಕಂಡುಬಂದಿದೆ ಎಂದು ಭಾರತೀಯ ಹವಾಮಾನ ಇಲಾಖೆ (India Meteorological Department) ಬುಧವಾರ ತಿಳಿಸಿದೆ. ಮೇ 9ರ ವೇಳೆಗೆ ಬಂಗಾಳ ಕೊಲ್ಲಿಯಲ್ಲಿ ಚಂಡಮಾರುತ (cyclone) ಸೃಷ್ಟಿಯಾಗುವ ಸಾಧ್ಯತೆ ದಟ್ಟವಾಗಿದ್ದು, ಅದರ ಪಥ ಯಾವ ಕಡೆ ಇರಲಿದೆ ಎಂಬುದನ್ನು ಇನ್ನು ಕೆಲವೇ ದಿನಗಳಲ್ಲಿ ಹೇಳುವುದಾಗಿ ಮಾಹಿತಿ ನೀಡಿದೆ.
ಮೇ 6ರ ವೇಳೆಗೆ ಬಂಗಾಳ ಕೊಲ್ಲಿಯಲ್ಲಿ ಹಲವು ಬದಲಾವಣೆಗಳಾಗಲಿವೆ. ಅದಾದ ಮರುದಿನವೇ ವಾಯುಭಾರ ಕುಸಿತ ಉಂಟಾಗುವ ಸಾಧ್ಯತೆ ಇದೆ. ಹೀಗಾಗಿ ಮೀನುಗಾರರು ಹಾಗೂ ಹಡಗು ನಡೆಸುವವರು ಬಂಗಾಳ ಕೊಲ್ಲಿಗೆ ಇಳಿಯಬಾರದು ಎಂದು ಹವಾಮಾನ ಇಲಾಖೆಯ ಮಹಾನಿರ್ದೇಶಕ ಮೃತ್ಯುಂಜಯ ಮೊಹಾಪಾತ್ರ (Mrityunjaya Mohapatra) ಅವರು ಮನವಿ ಮಾಡಿದ್ದಾರೆ.
ಒಂದು ವೇಳೆ ಈ ಚಂಡಮಾರುತ ಸೃಷ್ಟಿಯಾದದ್ದೇ ಆದಲ್ಲಿ ಅದು ಭಾರತ ಕಾಣುತ್ತಿರುವ ಈ ವರ್ಷದ ಮೊದಲ ಚಂಡಮಾರುತ ವಾಗಲಿದ್ದು, ಅದಕ್ಕೆ ಸರದಿಯ ಪ್ರಕಾರ ‘ಮೋಕಾ’ ಎಂಬ ಹೆಸರನ್ನು ಇಡಬೇಕಾಗುತ್ತದೆ. ಈ ಹೆಸರನ್ನು ಯೆಮೆನ್ ಸೂಚಿಸಿದೆ. ಮೋಕಾ ಎಂಬುದು ಯೆಮೆನ್ನಲ್ಲಿರುವ ಕೆಂಪು ಸಮುದ್ರದ ಬಂದರು ನಗರಿಯ ಹೆಸರಾಗಿದೆ. ಭಾರತದಲ್ಲಿ ಎರಡು ಚಂಡಮಾರುತ ಋುತುಗಳು ಇವೆ. ಏಪ್ರಿಲ್- ಮೇ– ಜೂನ್ ಅವಧಿಯಲ್ಲಿ ಚಂಡಮಾರುತ ಕಂಡುಬರುತ್ತವೆ. ಬಳಿಕ ಅಕ್ಟೋಬರ್- ನವೆಂಬರ್- ಡಿಸೆಂಬರ್ ಅವಧಿಯಲ್ಲೂ ಚಂಡಮಾರುತಗಳು ಕಾಣಿಸಿಕೊಳ್ಳುತ್ತವೆ.