ಮದುವೆ ಮನೆ ಅಂದ್ರೆ ಸಂಭ್ರಮ, ಸಡಗರ ಇದ್ದೇ ಇರುತ್ತೆ. ಆದ್ರೆ ಇತ್ತೀಚಿನ ಮದುವೆ ಮನೆಗಳಲ್ಲಿ ಕ್ಷುಲ್ಲಕ ಕಾರಣಕ್ಕೆ ಗಲಾಟೆಯಾಗೋದು ಸಾಮಾನ್ಯವಾಗಿ ಹೋಗಿದೆ. ಮಂಟಪ, ಡೆಕೊರೇಷನ್, ವರದಕ್ಷಿಣೆ, ಊಟ ಹೀಗೆ ನಾನಾ ಕಾರಣಗಳಿಗೆ ಗಲಾಟೆ ನಡೆಯುತ್ತದೆ. ಕೆಲವೊಮ್ಮೆ ಸಮಾರಂಭಕ್ಕೆ ಬಂದ ಅತಿಥಿಗಳು ಸಹ ಗಲಾಟೆ ಮಾಡುತ್ತಾರೆ. ಜಾರ್ಖಂಡ್ ಮದುವೆಯೊಂದರಲ್ಲಿ ಬಿಸಿ ಪೂರಿಗಳನ್ನು ಕೊಡಲು ನಿರಾಕರಿಸಿದ್ದಕ್ಕೆ ಅತಿಥಿಗಳು ಗಲಾಟೆ ನಡೆಸಿದ್ದಾರೆ. ಮಾತ್ರವಲ್ಲ ಕಲ್ಲು ತೂರಾಟ ಕೂಡಾ ಮಾಡಿದ್ದಾರೆ. ಜಾರ್ಖಂಡ್ನ ಗಿರಿದಿಹ್ನಲ್ಲಿ ಈ ಘಟನೆ ನಡೆದಿದೆ.
ಬಿಸಿ ಬಿಸಿ ಪೂರಿ ಕೊಡದ್ದಕ್ಕೆ ಅತಿಥಿಗಳಿಗೆ ಸಿಟ್ಟು
ರಾತ್ರಿ ಮುಫಾಸಿಲ್ ಠಾಣಾ ವ್ಯಾಪ್ತಿಯ ಪಟರೋಡಿ ಪ್ರದೇಶದಲ್ಲಿ ಶಂಕರ್ ಯಾದವ್ ಎಂಬುವರು ಆಯೋಜಿಸಿದ್ದ ಮದುವೆ (Marriage) ಸಮಾರಂಭದಲ್ಲಿ ಯುವಕರ ಗುಂಪೊಂದು ಪಾಲ್ಗೊಂಡಿತ್ತು. ಊಟ ಮಾಡುವ ಸಂದರ್ಭದಲ್ಲಿ ಅತಿಥಿಗಳು (Guest) ಬಿಸಿ ಬಿಸಿ ಪೂರಿಯನ್ನು ಕೇಳಿದ್ದಾರೆ. 2 ಗಂಟೆ ಸುಮಾರಿಗೆ ಬಿಸಿ ಬಿಸಿ ಪೂರಿಯನ್ನು ಕೇಳಲು ಆರಂಭಿಸಿದ ಯುವಕನೊಬ್ಬನಿಂದ ಗಲಾಟೆ ಶುರುವಾಗಿದೆ ಎಂದು ತಿಳಿದುಬಂದಿದೆ. ಬಿಸಿ ಪೂರಿ ರೆಡಿ ಇಲ್ಲವಾದ ಕಾರಣ ಜಗಳವಾಡಿದ್ದಾರೆ. ನಂತರ ಮದುವೆ ಮನೆಯಲ್ಲೇ ಎರಡು ಗುಂಪಿನ ಮಧ್ಯೆ ಮಾರಾಮಾರಿ ನಡೆದಿದೆ ಎಂದು ತಿಳಿದುಬಂದಿದೆ.
ಮದ್ವೆ ಮನೆಯಲ್ಲಿ ಗಲಾಟೆ, ಪರಿಸ್ಥಿತಿ ನಿಯಂತ್ರಿಸಿದ ಪೊಲೀಸರು
ಗಲಾಟೆ ಮಾಡಲು ಕೆಲವು ಇತರ ಯುವಕರನ್ನು ಹೊರಗಿನಿಂದ ಕರೆಸಲಾಗಿತ್ತು ಎಂದು ನಂತರ ತಿಳಿದುಬಂತು. ಪರಿಸ್ಥಿತಿ ತ್ವರಿತವಾಗಿ ಉಲ್ಬಣಗೊಂಡಿತು ಮತ್ತು ಕಲ್ಲು ತೂರಾಟ ಮತ್ತು ಗೂಂಡಾಗಿರಿಯ ನಡೆಸಲಾಯಿತು. ಇದರ ಪರಿಣಾಮವಾಗಿ ಮೂರ್ನಾಲ್ಕು ಜನರಿಗೆ ಗಾಯಗಳಾಗಿವೆ (Injury). ಘಟನೆ ಕುರಿತು ಮಾಹಿತಿ ಪಡೆದ ಪೊಲೀಸರು ಹೆಚ್ಚಿನ ಸಂಖ್ಯೆಯಲ್ಲಿ ಸ್ಥಳಕ್ಕೆ ಆಗಮಿಸಿ ಪರಿಸ್ಥಿತಿ ನಿಯಂತ್ರಿಸಿದ್ದಾರೆ. ಪೊಲೀಸರು ಅತಿಥಿಗಳನ್ನು (Guests) ಶಾಂತಗೊಳಿಸಲು ಮತ್ತು ಪರಿಸ್ಥಿತಿಯನ್ನು ಹತೋಟಿಗೆ ತರಲು ಪ್ರಯತ್ನಿಸಿದರು.
ಇಡೀ ವಿವಾದಕ್ಕೆ ಪ್ರಚೋದನೆ ನೀಡಿದ ಯುವಕನನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಗಾಯಾಳುಗಳನ್ನು ಸಮೀಪದ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಸದ್ಯ ಚಿಕಿತ್ಸೆ (Treatment) ಪಡೆಯುತ್ತಿದ್ದಾರೆ. ಘಟನೆ ಕುರಿತು ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.