ಟೊರಂಟೊ: ಕೆನಡಾ ಸಂಸದ ಮೈಕೇಲ್ ಚಾಂಗ್ ಅವರ ಹಾಂಕಾಂಗ್ ಸಂಬಂಧಿಕರಿಗೆ ಚೀನದ ರಾಜತಾಂತ್ರಿಕ ಅಧಿಕಾರಿಯೊಬ್ಬರು ಬೆದರಿಕೆ ಹಾಕಿದ್ದಾರೆ.
ಚೀನಾ ರಾಜತಾಂತ್ರಿಕರನ್ನು ದೇಶದಿಂದ ಹೊರಕ್ಕೆ ಹಾಕಲು ಚಿಂತಿಸಲಾಗುತ್ತಿದೆ ಎಂದು ಕೆನಡಾ ವಿದೇಶಾಂಗ ಸಚಿವ ಮೆಲಾನಿ ಜಾಲಿ ಹೇಳಿದ್ದಾರೆ. ಈ ಬಗ್ಗೆ ಚೀನಾ ರಾಯಭಾರಿಗೂ ಸಮನ್ಸ್ ನೀಡಿ, ಇಂತಹ ವರ್ತನೆಗಳನ್ನು ಕೆನಡಾ ಸಹಿಸುವುದಿಲ್ಲ ಎಂದು ಹೇಳಲಾಗಿದೆ.
ಬೀಜಿಂಗ್ ಮಾನವ ಹಕ್ಕು ಗಳನ್ನು ದಮನ ಮಾಡುತ್ತಿದೆ ಎಂದು ಕೆನಡಾ ವಿಪಕ್ಷ ಕನ್ಸರ್ವೇಟಿವ್ನ ಸಂಸದ ಮೈಕೇಲ್ ಚಾಂಗ್ ಟೀಕಿಸಿದ್ದರು. ಅದಾದ ಮೇಲೆ ಚಾಂಗ್ ಮತ್ತು ಅವರ ಹಾಂಕಾಂಗ್ ಸಂಬಂಧಿಕರನ್ನು ಗುರಿ ಮಾಡಿಕೊಳ್ಳಲಾಗಿತ್ತು. ಇದನ್ನು ಕೆನಡಾ ಗಂಭೀರವಾಗಿ ಪರಿಗಣಿಸಿದೆ. ಈ ಬಗ್ಗೆ ಪ್ರತಿಕ್ರಿಯಿಸಿರುವ ಜಾಲಿ, ನಾವು ವಿವಿಧ ಆಯ್ಕೆಗಳನ್ನು ಪರಿಶೀಲಿಸುತ್ತಿದ್ದೇವೆ. ಅದರಲ್ಲಿ ಚೀನ ರಾಜತಾಂತ್ರಿಕರನ್ನು ದೇಶದಿಂದ ಹೊರಹಾಕುವುದೂ ಒಂದು ಎಂದಿದ್ದಾರೆ. ಇದಕ್ಕೆ ಪ್ರತಿಕ್ರಿಯೆ ನೀಡಿರುವ ಚೀನಾ ರಾಯಭಾರಿ ಕಾಂಗ್ ಪೆಲು, ತಮ್ಮ ರಾಜತಾಂತ್ರಿಕರನ್ನು ಹೊರಹಾಕುವುದರ ವಿರುದ್ಧ ಕೆನಡಾಕ್ಕೆ ಎಚ್ಚರಿಕೆ ನೀಡಿದ್ದಾರೆ ಎನ್ನಲಾಗುತ್ತಿದೆ.