ಬಾದಾಮಿ: ‘ಜನರ ಭಾವನೆಗಳು ಏನು ಎಂಬುದು ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಅವರಿಗೆ ಅರ್ಥವಾಗಿದೆ. ಅದೇ ಕಾರಣಕ್ಕೆ ಮತ್ತೊಂದು ಕ್ಷೇತ್ರ ಆಯ್ಕೆ ಮಾಡಿಕೊಂಡಿದ್ದಾರೆ. ಗೆಲ್ಲಿಸಿರುವ ಜನರನ್ನು ತಿರಸ್ಕರಿಸಿ ಅವರು ಓಡಿ ಹೋಗಿದ್ದಾರೆ’ ಎಂದು ಪ್ರಧಾನಿ ಮೋದಿ (Narendra Modi) ವ್ಯಂಗ್ಯವಾಡಿದರು. ಬಾಗಲಕೋಟೆ ಜಿಲ್ಲೆಯ ಬಾದಾಮಿಯಲ್ಲಿ ಬಿಜೆಪಿಯ ಚುನಾವಣಾ ಪ್ರಚಾರ ಸಮಾವೇಶ ಉದ್ದೇಶಿಸಿ ಮಾತನಾಡಿದ ಅವರು, ಸಿದ್ದರಾಮಯ್ಯ ವಿರುದ್ಧ ವಾಗ್ದಾಳಿ ನಡೆಸಿದರು. ಕಳೆದ ಚುನಾವಣೆಯಲ್ಲಿ ಬಾದಾಮಿ ಕ್ಷೇತ್ರಕ್ಕೆ ಬಂದಿದ್ದ ಸಿದ್ದರಾಮಯ್ಯರನ್ನು ಜನ ಗೆಲ್ಲಿಸಿದರು. ಆದರೆ, ಅವರು ಗೆಲ್ಲಿಸಿದ ಜನರನ್ನು ತಿರಸ್ಕರಿಸಿ ಓಡಿಹೋಗಿದ್ದಾರೆ. ಬಾದಾಮಿ ಕ್ಷೇತ್ರದಲ್ಲಿ ಸಿದ್ದರಾಮಯ್ಯ ಯಾವುದೇ ಅಭಿವೃದ್ಧಿ ಮಾಡಿಲ್ಲ ಎಂದು ಮೋದಿ ಟೀಕಿಸಿದರು. ಸಿದ್ದರಾಮಯ್ಯ ಅವರು ಈ ಬಾರಿ ಬಾದಾಮಿಯ ಬದಲಿಗೆ ವರುಣಾ ಕ್ಷೇತ್ರದಿಂದ ಕಣಕ್ಕಿಳಿದಿದ್ದಾರೆ. ಬಾಗಲಕೋಟೆ ಮತ್ತು ಗದಗ ಜಿಲ್ಲೆಗಳ ಅಭ್ಯರ್ಥಿಗಳ ಪರವಾಗಿ ಅವರು ಮತಯಾಚನೆ ಮಾಡಿದರು.
ಬೆಂಗಳೂರಿನಲ್ಲಿ ಜನತಾ ಜನಾರ್ದನನ ದರ್ಶನ ಮಾಡಿ ಬಂದಿರುವೆ. ಸುಮಾರು 25ಕ್ಕಿಂತ ಹೆಚ್ಚು ಕಿಲೋಮೀಟರ್ಗೂ ಹೆಚ್ಚು ರೋಡ್ಶೋ ಮಾಡಿ ಬಂದಿದ್ದೇನೆ. ವೃದ್ಧರು, ಮಹಿಳೆಯರು, ಮಕ್ಕಳು, ಉದ್ಯೋಗಿಗಳು ಆಗಮಿಸಿದ್ದರು. ಕರ್ನಾಟಕದ ಜನರು ನೀಡಿದ ಪ್ರೀತಿಗೆ ನಾನು ಆಭಾರಿಯಾಗಿದ್ದೇನೆ. ರಾಜ್ಯದ ಯಾವುದೇ ಭಾಗಕ್ಕೆ ಹೋದರೂ ಒಂದೇ ಕೂಗು ಕೇಳಿಬರುತ್ತಿದೆ. ‘ಈ ಬಾರಿಯ ನಿರ್ಧಾರ ಬಹುಮತದ ಬಿಜೆಪಿ ಸರ್ಕಾರ’ ಎಂದು ಪ್ರಧಾನಿ ಮೋದಿ ಹೇಳಿದರು.
ಅಭಿವೃದ್ಧಿಯಲ್ಲಿ ದೇಶದಲ್ಲೇ ಕರ್ನಾಟಕ ನಂಬರ್ 1 ಮಾಡುವ ಗುರಿಯಿದೆ. ಇದಕ್ಕಾಗಿ ಬಿಜೆಪಿಗೆ ಆಶೀರ್ವಾದಿಸಲು ಕೋರುವೆ. ಬಿಜೆಪಿಗೆ ಜನರ ಬೆಂಬಲ ಸಹಿಸಲಾಗದೆ ಕಾಂಗ್ರೆಸ್ನವರು ಬೈಯ್ಯುತ್ತಿದ್ದಾರೆ. ಕಾಂಗ್ರೆಸ್ನವರು ನನಗೆ, ಬಿಜೆಪಿಗೆ ಬೈದಷ್ಟು ಕಮಲ ಅರಳಲಿದೆ. ಕಾಂಗ್ರೆಸ್ ಪಕ್ಷದಿಂದ ತುಷ್ಟೀಕರಣ ರಾಜಕಾರಣ ಮುಂದುವರಿದಿದೆ. ಆದರೆ, ಕೇಂದ್ರ ಸರ್ಕಾರದ ಯೋಜನೆಗಳು ಜನಪರವಾಗಿದೆ ಎಂದು ಮೋದಿ ಹೇಳಿದರು.