ಮೈಸೂರು: ಉತ್ತರದ ಕಾಶಿ ಲೋಕಸಭಾ ಕ್ಷೇತ್ರವನ್ನು ಪ್ರತಿನಿಧಿಸುವ ಪ್ರಧಾನಮಂತ್ರಿ ನರೇಂದ್ರ ಮೋದಿಯವರು ದಕ್ಷಿಣ ಕಾಶಿ ಪ್ರಸಿದ್ಧಿಯ ನಂಜನಗೂಡಿಗೆ ಇಂದು ಆಗಮಿಸುವ ಹಿನ್ನೆಲೆಯಲ್ಲಿ 1 ಲಕ್ಷಕ್ಕೂ ಹೆಚ್ಚಿನ ಜನರು ಕಾರ್ಯಕ್ರಮದಲ್ಲಿ ಭಾಗಿಯಾಗಲಿದ್ದಾರೆ.
ತಾಲೂಕಿನ ಎಲಚಗೆರೆ ಗ್ರಾಮದಲ್ಲಿ ಬಿಜೆಪಿ ಸಮಾವೇಶ ನಡೆಯಲಿದ್ದು, ಸ್ಥಳದಲ್ಲಿ ಸಿದ್ಧತೆಗಳನ್ನು ಮಾಜಿ ಸಚಿವ ಎಸ್. ಎ. ರಾಮದಾಸ್ ಪರಿಶೀಲಿಸಿದರು. ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು ‘ಸಮಾವೇಶದಲ್ಲಿ ಚಾಮರಾಜನಗರ ಲೋಕಸಭಾ ಕ್ಷೇತ್ರ ವ್ಯಾಪ್ತಿಯ 8 ವಿಧಾನಸಭಾ ಕ್ಷೇತ್ರಗಳ ಕಾರ್ಯಕರ್ತರು ಭಾಗಿಯಾಗಲಿದ್ದಾರೆ. ಸಮಾವೇಶದ ಆರಂಭಕ್ಕೂ ಮುನ್ನ 3 ಸಾವಿರ ಬೈಕ್ಗಳಲ್ಲಿ ಕಾರ್ಯಕರ್ತರು ಆಗಮಿಸಲಿದ್ದಾರೆ. ವಾಹನಗಳ ನಿಲುಗಡೆಗಾಗಿ 14 ಪ್ರದೇಶಗಳನ್ನು ಗುರುತಿಸಲಾಗಿದೆ. ವಿಶೇಷವಾಗಿ ಸಮಾವೇಶ ನಡೆಯುವ ಸ್ಥಳದಲ್ಲಿ ಕಳೆದ 9 ವರ್ಷಗಳ ಅವಧಿಯಲ್ಲಿ ಪ್ರಧಾನಮಂತ್ರಿ ನರೇಂದ್ರ ಮೋದಿ ಸರಕಾರದ ಅಧಿಕಾರಾವಧಿಯ ಸಾಧನೆಗಳನ್ನು ಬಿಂಬಿಸುವ ಭಿತ್ತಿಚಿತ್ರಗಳ ಪ್ರದರ್ಶನ ಮಾಡಲಾಗುವುದು. ಜತೆಗೆ ಸಮಾವೇಶದಲ್ಲಿ ಭಾಗಿಯಾಗುವ 2 ಸಾವಿರ ಯುವಕರಿಗೆ ಸ್ಥಳದಲ್ಲೇ ಟ್ಯಾಟು ಹಾಕುವುದು ಹಾಗೂ 2 ಸಾವಿರ ಮಹಿಳೆಯರಿಗೆ ಮೆಹಂದಿ ಹಾಕಲಾಗುವುದು. ಸುಮಾರು 500ಕ್ಕೂ ಹೆಚ್ಚು ಮಂದಿ ಸ್ವಯಂ ಸೇವಕರು ಸೇವಾ ಕಾರ್ಯದಲ್ಲಿ ಭಾಗಿಯಾಗಲಿದ್ದಾರೆ’ ಎಂದರು.
‘ಮೈಸೂರು ಮತ್ತು ಚಾಮರಾಜನಗರ ಜಿಲ್ಲೆಯ 17 ಮಂದಿ ಅಭ್ಯರ್ಥಿಗಳೂ ಸೇರಿದಂತೆ ಒಟ್ಟು 33 ಮಂದಿ ವೇದಿಕೆಯಲ್ಲಿ ಉಪಸ್ಥಿತರಿರುತ್ತಾರೆ. ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಹೆಲಿಪ್ಯಾಡ್ ಆವರಣದಿಂದ ವೇದಿಕೆಗೆ ತೆರಳುವ ವೇಳೆ ಮೈಸೂರು ಮತ್ತು ಚಾಮರಾಜ ನಗರ ಜಿಲ್ಲೆಯ ಜಾನಪದ ಸಂಸ್ಕೃತಿಯನ್ನು ಬಿಂಬಿಸುವ ಕಲಾವಿದರು ಕಲಾ ಪ್ರದರ್ಶನಗಳೊಂದಿಗೆ ಅವರನ್ನು ಬರಮಾಡಿಕೊಳ್ಳಲಿದ್ದಾರೆ’ ಎಂದು ರಾಮದಾಸ್ ತಿಳಿಸಿದರು.
ದೇವಸ್ಥಾನಕ್ಕೆ ಭೇಟಿ: ‘ಸಂಜೆ 4.25ಕ್ಕೆ ನಂಜನಗೂಡಿನ ಎಲಚಗೆರೆಗೆ ಆಗಮಿಸುವ ಮೋದಿಯವರು 5.30ರವರೆಗೆ ಬಿಜೆಪಿ ಸಮಾವೇಶದಲ್ಲಿ ಭಾಗಿಯಾಗಲಿದ್ದು, ಬಳಿಕ ರಸ್ತೆ ಮೂಲಕ ನಂಜನಗೂಡು ನಗರಕ್ಕೆ ತೆರಳಿ 5.45ಕ್ಕೆ ಶ್ರೀಕಂಠೇಶ್ವರ ಸ್ವಾಮಿ ದೇವಸ್ಥಾನಕ್ಕೆ ತೆರಳಿ ದೇವರ ದರ್ಶನ ಪಡೆಯಲಿದ್ದಾರೆ. ದೇಗುಲ ಭೇಟಿ ಸಂದರ್ಭ ರಸ್ತೆಯ ಇಕ್ಕೆಲಗಳಲ್ಲಿ ಉತ್ತರದ ಕಾಶಿಯಿಂದ ದಕ್ಷಿಣದ ಕಾಶಿಗೆ ಪ್ರಧಾನಮಂತ್ರಿ ನರೇಂದ್ರ ಮೋದಿ ಎಂಬ ಆಕರ್ಷಕ ಚಿತ್ರಣದ ಮೂಲಕ ಸ್ವಾಗತಿಸಲಾಗುವುದು. ದೇವಸ್ಥಾನದಿಂದ ರಸ್ತೆ ಮೂಲಕ ಮೈಸೂರಿನ ವಿಮಾನ ನಿಲ್ದಾಣಕ್ಕೆ ತೆರಳಿ ಅಲ್ಲಿಂದ ದಿಲ್ಲಿ ತಲುಪಲಿದ್ದಾರೆ’ ಎಂದು ರಾಮದಾಸ್ ಹೇಳಿದರು.
ಶಿವನ ಸ್ಮರಣಿಕೆ: ದಕ್ಷಿಣ ಕಾಶಿ ಪ್ರಸಿದ್ಧಿಯ ನಂಜನಗೂಡಿನ ಶ್ರೀಕಂಠೇಶ್ವರ ಸ್ವಾಮಿ ದೇವಾಲಯಕ್ಕೆ ಆಗಮಿಸುವ ಮೊದಲ ಪ್ರಧಾನಮಂತ್ರಿ ನರೇಂದ್ರ ಮೋದಿಯವರಿಗೆ ಸ್ಥಳೀಯ ಜಾನಪದ ಕಲಾ ಸಂಸ್ಕೃತಿಯ ಸ್ವಾಗತದೊಂದಿಗೆ ಶಿವನ ರೂಪವಾಗಿರುವ ಲಿಂಗವನ್ನು ನೆನಪಿನ ಕಾಣಿಕೆಯಾಗಿ ಶಾಸಕ ಬಿ. ಹರ್ಷವರ್ಧನ್ ನೀಡುತ್ತಿದ್ದಾರೆ.
ಈ ಕುರಿತು ಮಾತನಾಡಿದ ಶಾಸಕ ಬಿ. ಹರ್ಷವರ್ಧನ್, ‘ಪ್ರಧಾನಮಂತ್ರಿ ನರೇಂದ್ರ ಮೋದಿಯವರು ನಂಜನಗೂಡಿಗೆ ಭೇಟಿ ನೀಡುತ್ತಿರುವುದು ವೈಯಕ್ತಿಕವಾಗಿ ಸಂತಸದ ಸಂಗತಿಯಾಗಿದ್ದು ಜತೆಗೆ ಭವಿಷ್ಯದಲ್ಲಿ ನಂಜನಗೂಡು ದೇವಾಲಯದ ಸಮಗ್ರ ಅಭಿವೃದ್ಧಿಗೆ ಮೋದಿಯವರ ಭೇಟಿ ನೆರವಾಗಲಿದೆ. ಕಳೆದ 5 ವರ್ಷಗಳಲ್ಲಿ ಕ್ಷೇತ್ರದಲ್ಲಿ 823 ಕೋಟಿಗೂ ಹೆಚ್ಚು ಮೊತ್ತದ ಅನುದಾನ ತಂದು ಅಭಿವೃದ್ಧಿಪಡಿಸಲಾಗಿದೆ. ಮತದಾರರು ಕ್ಷೇತ್ರದ ಅಭಿವೃದ್ಧಿಯನ್ನು ಮುಂದುವರಿಸಿ ಕೊಂಡು ಹೋಗುವ ಸಲುವಾಗಿ ಬಿಜೆಪಿಯನ್ನು ಬೆಂಬಲಿಸಲಿದ್ದು, ಪ್ರಧಾನಮಂತ್ರಿ ನರೇಂದ್ರ ಮೋದಿಯವರ ಆಗಮನದಿಂದ ನಂಜನಗೂಡು ಬಿಜೆಪಿಗೆ ಇನ್ನೂ ಹೆಚ್ಚಿನ ನೆರವಾಗಲಿದೆ’ ಎಂದು ಹೇಳಿದರು.