ಮಂಡ್ಯ : ಬಿಜೆಪಿ ಸರ್ಕಾರ ಮತ್ತೆ ಅಧಿಕಾರಕ್ಕೆ ಬರೋಲ್ಲ, ಜೆಡಿಎಸ್ 20 ಕ್ಷೇತ್ರದ ಮೇಲೆ ದಾಟುವುದಿಲ್ಲ. ಎರಡು ಪಕ್ಷಗಳಿಗೂ ಅಧಿಕಾರ ಕೊಟ್ಟು ಜನತೆ ಸಾಕಷ್ಟು ನೊಂದಿದ್ದಾರೆ ಹೀಗಾಗಿ ಕಾಂಗ್ರೆಸ್ ಪಕ್ಷವನ್ನು ರಾಜ್ಯದ ಮತದಾರ ಪ್ರಭುಗಳು ಬೆಂಬಲಿಸಿದ್ದಾರೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ವಿಶ್ವಾಸ ವ್ಯಕ್ತಪಡಿಸಿದರು.
ನಾಗಮಂಗಲ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಮದ್ದೂರು ತಾಲೂಕಿನ ಕೊಪ್ಪ ಗ್ರಾಮದಲ್ಲಿ ಶನಿವಾರ ಸಂಜೆ ಬೃಹತ್ ಬಹಿರಂಗ ಸಭೆ ಉದ್ದೇಶಿಸಿ ಕೈ ಅಭ್ಯರ್ಥಿ ಎನ್.ಚಲುವರಾಯಸ್ವಾಮಿ ಪರ ಮತಯಾಚನೆ ಮಾಡಿದರು.
ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬರುವುದು ನಿಶ್ಚಿತವಾಗಿದೆ. ಹಾಗಾಗಿ ಜನ ಸಾಮಾನ್ಯರಿಗೆ ನೆರವಾಗಬೇಕೆಂಬ ಉದ್ದೇಶದಿಂದ ಐದು ಗ್ಯಾರಂಟಿ ಯೋಜನೆಯನ್ನು ನೀಡಿದ್ದೇವೆ.
ಗೃಹಜ್ಯೋತಿ ಯೋಜನೆ ಮೂಲಕ ಪ್ರತಿ ತಿಂಗಳು 200 ಯೂನಿಟ್ ಉಚಿತ, ಪ್ರತಿ ಮನೆಯೊಡತಿಗೆ ಪ್ರತಿ ತಿಂಗಳು 2 ಸಾವಿರ ಪ್ರೋತ್ಸಾಹ ಧನ, ಅನ್ನಭಾಗ್ಯ ಯೋಜನೆ ಮೂಲಕ ಬಿಪಿಎಲ್ ಕಾರ್ಡ್ ನ ಪ್ರತಿ ಸದಸ್ಯರಿಗೆ ಪ್ರತಿ ತಿಂಗಳು 10 ಕೆ.ಜಿ ಅಕ್ಕಿ ಉಚಿತವಾಗಿ ನೀಡಲಾಗುವುದು. ಇನ್ನು ಯುವನಿಧಿ ಕಾರ್ಯಕ್ರಮದ ಮೂಲಕ ನಿರುದ್ಯೋಗ ಪದವೀಧರರಿಗೆ ಪ್ರತಿ ತಿಂಗಳು 3 ಸಾವಿರ, ಡಿಪ್ಲೋಮಾಪದವೀಧರರಿಗೆ 1500 ರೂ ನಿರುದ್ಯೋಗ ಭತ್ಯೆ ನೀಡಲಾಗುವುದು. ಇನ್ನು ರಾಜ್ಯದ ಮಹಿಳೆಯರಿಗೆ ಸಾರ್ವಜನಿಕ ಬಸ್ ಗಳಲ್ಲಿ ಉಚಿತ ಪ್ರಯಾಣ ಕಲ್ಪಿಸಲಾಗುವುದು ಎಂದರು.
ಈ ಯೋಜನೆಗಳನ್ನು ಕುಮಾರಸ್ವಾಮಿ, ಸುರೇಶ್ ಗೌಡ, ಬೊಮ್ಮಾಯಿ ಅವರು ನೀಡಲು ಸಾಧ್ಯವೇ ನಿಮ್ಮ ಮನೆ ಬಾಗಿಲಿಗೆ ಲಕ್ಷ್ಮೀ ಬಂದಿದ್ದಾಳೆ. ನೀವು ಆ ಲಕ್ಷ್ಮಿಯನ್ನು ಮನೆಯೊಳಗೆ ಕರೆದುಕೊಳ್ಳಬೇಕು. ಕೇವಲ ಮಾತು ಕೊಡುವುದಲ್ಲ, ಕೊಟ್ಟ ಮಾತನ್ನು ಉಳಿಸಿಕೊಳ್ಳಬೇಕು. ನಮ್ಮ ಸರ್ಕಾರದ ಬಂದ ಮೊದಲ ಸಚಿವ ಸಂಪುಟದಲ್ಲೇ ಈ ಯೋಜನೆಗಳು ಜಾರಿಯಾಗಲಿವೆ. 13ರಂದು ಕಾಂಗ್ರೆಸ್ ಪಕ್ಷ ಬಹುಮತದೊಂದಿಗೆ ಜಯಭೇರಿ ಬಾರಿಸಲಿದೆ. 15ರಂದು ಸರ್ಕಾರ ರಚನೆ ಮಾಡಿ ಮೊದಲ ಸಚಿವ ಸಂಪುಟದಲ್ಲೇ ಯೋಜನೆ ಜಾರಿಯಾಗಲಿದೆ ಎಂದು ಹೇಳಿದರು.
ಬಿಜೆಪಿ ಅವಧಿಯಲ್ಲಿ ದಿನ ಬೆಳಗಾದರೆ ಒಂದಿಲ್ಲೊಂದು ಹಗರಣಗಳು. ಬಿಜೆಪಿಯಲ್ಲಿ ಒಬ್ಬ ಲಂಚಕ್ಕೆ ಮತ್ತೊಬ್ಬ ಮಂಚಕ್ಕೆ ಹೋದ. ಅರಸೀಕೆರೆ ಶಿವಲಿಂಗೇಗೌಡ, ಗುಬ್ಬಿ ಶ್ರೀನಿವಾಸ್, ಕೋಲಾರ ಶ್ರೀನಿವಾಸಗೌಡ, ಮಧು ಬಂದಗಾರಪ್ಪ ಎಲ್ಲರೂ ಜೆಡಿಎಸ್ ಬಿಟ್ಟು ಕಾಂಗ್ರೆಸ್ ಸೇರಿದ್ದಾರೆ. ಅವರೆಲ್ಲರೂ ದಡ್ಡರೇ. ಬಿಜೆಪಿ ನಾಯಕರುಗಳಾದ ಜಗದೀಶ್ ಶೆಟ್ಟರ್, ಲಕ್ಷ್ಮಣ ಸವದಿ, ಪುಟ್ಟಣ್ಣ ಸೇರಿದಂತೆ ಅನೇಕರು ಕಾಂಗ್ರೆಸ್ ಸೇರಿದ್ದಾರೆ. ಪರಿಷತ್ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿಗಳಾದ ಮಧು ಮಾದೇಗೌಡ ಹಾಗೂ ದಿನೇಶ್ ಗೂಳಿಗೌಡ ಗೆದ್ದಿದ್ದಾರೆ. ಮುಂದಿನ ದಿನಗಳಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಅಧಿಕಾರ ನೀಡಿ ಡಿ.ಕೆ. ಶಿವಕುಮಾರ್ ಕೈ ಬಲಪಡಿಸಬೇಕೆಂದರು.
ಜಿಲ್ಲೆಯಲ್ಲಿ ಸಕ್ಕರೆ ಕಾರ್ಖಾನೆಯನ್ನು ಯಾವ ಸರ್ಕಾರವು ಪುನಶ್ಚೇತನಗೊಳಿಸಲಿಲ್ಲ. ನಾವು ಅಧಿಕಾರಕ್ಕೆ ಬಂದರೆ ಮಂಡ್ಯದಲ್ಲಿ ಹೊಸ ಸಕ್ಕರೆ ಕಾರ್ಖಾನೆಯನ್ನು ಸ್ಥಾಪನೆ ಮಾಡುತ್ತೇವೆ ಎಂದು ವಾಗ್ದಾನ ನೀಡಿದರು.
ಇಂದು ಭತ್ತ, ಕೊಬ್ಬರಿಗೆ ಬೆಂಬಲ ಬೆಲೆ ಇಲ್ಲದೆ ಕಂಗಾಲಾಗಿದ್ದಾರೆ. 20 ಸಾವಿರ ಇದ್ದ ಕೊಬ್ಬರಿ ಬೆಲೆ 9 ಸಾವಿರಕ್ಕೆ ಇಳಿದಿದೆ ಎಂದು ರೈತರು ಅಳಲು ತೋಡಿಕೊಂಡಿದ್ದಾರೆ. ನೀವು ಯೋಚನೆ ಮಾಡಬೇಡಿ. ನಿಮ್ಮ ಜನಪರ ಸರ್ಕಾರ ಅಧಿಕಾರಕ್ಕೆ ಬರಲಿದೆ. ಚಲುವರಾಯಸ್ವಾಮಿ ನಮ್ಮ ಸರ್ಕಾರದಲ್ಲಿರುತ್ತಾರೆ. ನಾವು ನಿಂತು ನಿಮ್ಮ ಸಮಸ್ಯೆ ಬಗೆಹರಿಸುವ ಕೆಲಸ ಮಾಡುತ್ತೇವೆ. ನೀವೆಲ್ಲರೂ ನನ್ನ ಸ್ನೇಹಿತ ಚೆಲುವರಾಯಸ್ವಾಮಿ ಅವರನ್ನು ಗೆಲ್ಲಿಸಬೇಕೆಂದು ಮನವಿ ಮಾಡಿದರು.
ಇದೇ ವೇಳೆ ವಿಧಾನ ಪರಿಷತ್ ಸದಸ್ಯ ಮಧು ಮಾದೇಗೌಡ, ಮಾಜಿ ಸದಸ್ಯ ಬಿ.ರಾಮಕೃಷ್ಣ, ಜಿಲ್ಲಾಧ್ಯಕ್ಷ ಸಿ.ಡಿ.ಗಂಗಾಧರ್, ನಾಗಮಂಗಲ ಗ್ರಾಮಾಂತರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಕೆ.ಎನ್.ದಿವಾಕರ್, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಕುಮಾರ್ ಕೊಪ್ಪ, ತಾ.ಪಂ ಮಾಜಿ ಅಧ್ಯಕ್ಷೆ ಜಯಲಕ್ಷ್ಮಿ, ಮುಖಂಡರಾದ ಸಚಿನ್, ಧನಲಕ್ಷ್ಮಿ, ವಿಜಯಲಕ್ಷ್ಮಿ, ತಾ.ಪಂ ಮಾಜಿ ಉಪಾಧ್ಯಕ್ಷ ರಘು, ಒಕ್ಕಲಿಗರ ಸಂಘದ ನಿರ್ದೇಶಕ ಮೂಡ್ಯ ಚಂದ್ರು, ಚಿಕ್ಕೋನಹಳ್ಳಿ ತಮ್ಮಯ್ಯ, ಗಟ್ಟಹಳ್ಳಿ ಹರೀಶ್, ಫರ್ವಿಜ್ ಅಹ್ಮದ್, ಕ್ರಾಂತಿ ಸಿಂಹ ಮತ್ತಿತರರು ಇದ್ದರು.
ವರದಿ : ಗಿರೀಶ್ ರಾಜ್ ಮಂಡ್ಯ.