ಕಲಬುರಗಿ: ಅವನು ಯಾರೋ ಕೆಲಸಕ್ಕೆ ಬಾರದೇ ಇರೋ ಐಪಿಎಸ್ (IPS) ಆಫೀಸರ್ ಅಣ್ಣಾಮಲೈ, ರಾಜಕೀಯ ಒತ್ತಡದಿಂದ ಮಣಿಕಂಠ ಮೇಲೆ ಕೇಸ್ ಹಾಕುತ್ತಾರೆ ಎಂದು ಹೇಳುತ್ತಾರೆ. ಅವರಿಗೆ ಬುದ್ದಿ ಇದೆಯಾ ಅಥವಾ ಇಲ್ವಾ ಎಂಬುದು ಗೊತ್ತಿಲ್ಲ ಎಂದು ಶಾಸಕ ಪ್ರಿಯಾಂಕ್ ಖರ್ಗೆ (Priyank Kharge) ಅಣ್ಣಾಮಲೈ (Annamalai) ವಿರುದ್ಧ ಕಿಡಿ ಕಾರಿದ್ದಾರೆ.
ಖರ್ಗೆ ಹತ್ಯೆ ಕುರಿತು ಬಿಜೆಪಿ ಅಭ್ಯರ್ಥಿ ಮಣಿಕಂಠ ರಾಥೋಡ್ (Manikanta Rathod) ಬೆದರಿಕೆ ಆಡಿಯೋ ಬಗ್ಗೆ ಅಣ್ಣಾಮಲೈ ಹೇಳಿಕೆ ಕುರಿತು ಕಲಬುರಗಿಯಲ್ಲಿ (Kalaburagi) ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಐಪಿಎಸ್ ಓದಿದವರು ಹೇಗೆ ಮಾತನಾಡಬೇಕು ಎಂಬುದನ್ನು ತಿಳಿದುಕೊಳ್ಳಲಿ. ಅಣ್ಣಾಮಲೈ ಡಿಸಿಪಿ ಆಗಿದ್ದಾಗ ರಾಜಕೀಯ ಒತ್ತಡದಿಂದಲೇ ಎಲ್ಲಾ ಕೇಸ್ ಮಾಡಿದ್ದಾರೆ. ಬಿಜೆಪಿಯವರು (BJP) ಖರ್ಗೆ ಕುಟುಂಬದ ಬಗ್ಗೆ ತಮ್ಮ ಮನದಾಳದ ಮಾತು ಏನು ಎಂದು ಹೇಳಲಿ. ಆ ಆಡಿಯೋವನ್ನು ನಾನೇ ಮಾಡಿಸಿದ್ದೇನೆ ಎಂದು ಹೇಳುತ್ತಾರೆ. ಈಗ ಸರ್ಕಾರ ಅವರದ್ದೇ ಇದೆಯಲ್ವಾ? ತನಿಖೆ ಮಾಡಿಸಲಿ ಎಂದು ಹರಿಹಾಯ್ದರು.
ಚಿತ್ತಾಪುರ ಅಭ್ಯರ್ಥಿ ಬಹಳ ಬುದ್ದಿವಂತ ಅಲ್ಲ. ಅವನು ಏನಿದ್ದರೂ ಅಕ್ಕಿಪಕ್ಕಿ ಲೆವೆಲ್ ಅಲ್ಲಿಯೇ ಇರುತ್ತಾನೆ. ಅದಕ್ಕೆ ಚಿತ್ತಾಪುರ ಉಸ್ತುವಾರಿಯ ಸುಪಾರಿಯನ್ನು ರವಿ ಕುಮಾರ್ ಅವರಿಗೆ ಕೊಟ್ಟಿರುವುದು. ಬಿಜೆಪಿಯವರು ಹತಾಶರಾಗಿದ್ದಾರೆ. ರವಿ ಕುಮಾರ್ ಅವರಿಗೆ ಈ ಹಿಂದೆಯೇ ಜೇವರ್ಗಿ ಮತ್ತು ಅಫಜಲಪುರದ ಟಿಕೆಟ್ ಮಾರಾಟ ಆಗಿದ್ಯಾ ಎಂದು ಕೇಳಿದ್ದೆ. ಮೋದಿಯವರು ಫೈಟರ್ ರವಿಗೆ ನಮಸ್ಕಾರ ಹಾಕಿದಾಗಲೇ ಗೊತ್ತಾಯಿತು. ಮಣಿಕಂಠನಿಗೆ ಸಾಷ್ಟಾಂಗ ನಮಸ್ಕಾರ ಹಾಕಿ ಬಿಡುತ್ತಾರೆ ಎಂದು ಕಾಣಿಸುತ್ತದೆ. ಮೋದಿ ಚಿತ್ತಾಪುರಕ್ಕೆ ಬರದೇ ಇರುವುದಕ್ಕೆ ನನಗೆ ಬಹಳ ನಿರಾಸೆಯಾಗಿದೆ ಎಂದರು.
ಇದೇ ಮಣಿಕಂಠ ಈ ಹಿಂದೆ ನವೆಂಬರ್ನಲ್ಲಿ ನನಗೆ ಶೂಟ್ ಮಾಡುತ್ತೇನೆ ಎಂದು ಕ್ಯಾಮೆರಾ ಮುಂದೆ ಹೇಳಿದ್ದ. ಬಿಜೆಪಿಯವರು ಮಾತನಾಡಿದರೆ ರಾಮರಾಜ್ಯ ಕಟ್ಟುತ್ತೇವೆ ಎಂದು ಹೇಳುತ್ತಾರೆ. ರಾಮರಾಜ್ಯವನ್ನು ರೌಡಿಗಳ ಜೊತೆ ಕಟ್ಟುತ್ತೀರಾ ಹೇಗೆ? ಬಿಜೆಪಿಯವರು ಎಂತಹವರಿಗೆ ಟಿಕೆಟ್ ಕೊಟ್ಟಿದ್ದಾರೆ ಎಂಬುದನ್ನು ಯೋಚನೆ ಮಾಡಲಿ. ರವಿ ಕುಮಾರ್ಗೆ ವಿಶ್ವನಾಥ್ ಪಾಟೀಲ್ ಅವರ ಕಾಲು ಧೂಳಿನಷ್ಟೂ ಅನುಭವ ಇಲ್ಲ. ವಿಶ್ವನಾಥ್ ಪಾಟೀಲ್ ಅವರನ್ನು ಖರೀದಿ ಮಾಡುತ್ತೇವೆ ಎಂದು ಚಿತ್ತಾಪುರದಲ್ಲಿ ಬಂದು ಹೇಳಲಿ. ವಿಶ್ವನಾಥ್ ಪಾಟೀಲ್ ಅವರು ಖರೀದಿ ಆಗುತ್ತಾರೆ ಎಂದು ತಿಳಿದುಕೊಂಡರೆ ಅವರಷ್ಟು ಮೂರ್ಖರು ಯಾರೂ ಇಲ್ಲ. ರವಿಕುಮಾರ್ ಗ್ರಾಮ ಪಂಚಾಯತ್ ಅಲ್ಲಿ ಗೆಲ್ಲಲು ಸಾಧ್ಯವಿಲ್ಲ ಎಂದು ವಾಗ್ದಾಳಿ ನಡೆಸಿದರು.
ಬಿಜೆಪಿಯವರು ಇಡೀ ರಾಜ್ಯದಲ್ಲಿ ಚುನಾವಣೆಯಲ್ಲಿ ಸೋಲುತ್ತಿದ್ದಾರೆ. ಚುನಾವಣೆ ಸಂದರ್ಭದಲ್ಲಿ ಜಾತಿ, ಧರ್ಮ ತಂದು ವೈಯಕ್ತಿಕವಾಗಿ ಜಗಳ ತಂದಿಡಲು ಮುಂದಾಗಿದ್ದಾರೆ. ಬಿಜೆಪಿಯವರಿಗೆ ಕರ್ನಾಟಕ ಕೈತಪ್ಪಿದರೆ ಮುಜುಗರ ಆಗುತ್ತದೆ ಎಂದು ಕೇಂದ್ರ ಸರ್ಕಾರಿ ಸಂಸ್ಥೆಗಳನ್ನು ದುರುಪಯೋಗ ಮಾಡಿಕೊಳ್ಳಲು ಮುಂದಾಗಿದ್ದಾರೆ. ಕಲಬುರಗಿಯಲ್ಲಿ ಶನಿವಾರ ಐಟಿ ಅಸ್ತ್ರವನ್ನು ಬಳಸಿಕೊಂಡಿದ್ದಾರೆ. ಕಾಂಗ್ರೆಸ್ (Congress) ಪಕ್ಷದ ನಿಷ್ಟಾವಂತ ಕಾರ್ಯಕರ್ತರಿಗೆ ಕಡಿವಾಣ ಹಾಕಲು ಪ್ರಯತ್ನ ಮಾಡುತ್ತಿದ್ದಾರೆ. ವಾಹೆದ್ ಅಲಿ, ಮೊಹ್ಮದ್ ಜಹಾಗೀರ್ದಾರ್, ಅರವಿಂದ್ ಚೌಹಾಣ್ ಮನೆ, ಹೋಟೆಲ್ ಹಾಗೂ ಸ್ಟೋನ್ ಕ್ರಷರ್ ಮೇಲೆ ದಾಳಿ ಮಾಡಿದ್ದಾರೆ. ಅಲ್ಲದೇ ಅರವಿಂದ್ ಅವರ ಮನೆಯಲ್ಲಿ ಅವರ ತಾಯಿ ಒಬ್ಬರೇ ಇದ್ದಾಗ ದಾಳಿ ನಡೆಸಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.