ಮೈಸೂರು: ರಾಜ್ಯ ವಿಧಾನಸಭೆ ಚುನಾವಣೆ (Assembly Election 2023) ಗೆ ಎರಡೇ ದಿನ ಬಾಕಿ ಇದೆ. ಎಲ್ಲಾ ಪಕ್ಷದ ಅಭ್ಯರ್ಥಿಗಳು ಭರ್ಜರಿ ಪ್ರಚಾರದಲ್ಲಿ ತೊಡಗಿದ್ದಾರೆ. ಈ ವೇಳೆ ಕೆಲವು ಕಡೆಗಳಲ್ಲಿ ಗಲಾಟೆಯೂ ಆಗಿದೆ. ಮೈಸೂರಿನ ಕೆ.ಆರ್ ನಗರ ಕ್ಷೇತ್ರದಲ್ಲಿ ಕಾಂಗ್ರೆಸ್ (Congress) ಹಾಗೂ ಜೆಡಿಎಸ್ (JDS) ಕಾರ್ಯಕರ್ತರ ಮಧ್ಯೆ ಜಟಾಪಟಿಯಾಗಿದೆ. ಬೀಚನಹಳ್ಳಿ ಕೊಪ್ಪಲು ಗ್ರಾಮದಲ್ಲಿ ಮತಯಾಚನೆ ವೇಳೆ ಕಾಂಗ್ರೆಸ್- ಜೆಡಿಎಸ್ ಮಧ್ಯೆ ಮಾತಿನ ಚಕಮಕಿ ಆಗಿದೆ. ಸಾ.ರಾ.ಮಹೇಶ್ ಪುತ್ರ ಸಾರಾ. ಧನುಷ್ ಕಾರಿಗೆ ಕಾಂಗ್ರೆಸ್ ಕಾರ್ಯಕರ್ತರು ಕಲ್ಲು ತೂರಾಟ ನಡೆಸಿದ್ದಾರೆ.
ಚಿತ್ರದುರ್ಗ (Chitradurga) ದ ಚಳ್ಳಕೆರೆ ಬಿಜೆಪಿ ಮಂಡಲ ಅಧ್ಯಕ್ಷನ ಕಾರಿನ ಮೇಲೆ ಕಲ್ಲೆಸೆತ ಆಗಿದ್ದು ಕಾಂಗ್ರೆಸ್ ವಿರುದ್ಧ ಆರೋಪ ಮಾಡಲಾಗಿದೆ. ಆರೋಪಿಗಳ ಬಂಧನಕ್ಕೆ ಆಗ್ರಹಿಸಿ ತುರವನೂರು ಠಾಣೆ ಮುಂದೆ ಬಿಜೆಪಿ ಮುಖಂಡರು ಧರಣಿ ನಡೆಸಿದ್ರು. ಬೆಂಗಳೂರಿನ ಬಿಟಿಎಂ ಲೇಔಟ್ನ 1ನೇ ಹಂತದಲ್ಲಿ ಪ್ರಚಾರದ ವೇಳೆ ಬಿಜೆಪಿ ಕಾರ್ಯಕರ್ತನ ಮೇಲೆ ಕಾಂಗ್ರೆಸ್ ಕಾರ್ಯಕರ್ತರು ಹಲ್ಲೆ ಮಾಡಿರುವ ಆರೋಪ ಕೇಳಿಬಂದಿದೆ. ಬಿಜೆಪಿ ಅಭ್ಯರ್ಥಿ ಶ್ರೀಧರ್ ರೆಡ್ಡಿ ಪರ ಪ್ರಚಾರದ ವೇಳೆ ಕಾಂಗ್ರೆಸ್ ಹಾಗೂ ಬಿಜೆಪಿ ಕಾರ್ಯಕರ್ತರು ಮುಖಾಮುಖಿ ಆಗಿದ್ದಾರೆ. ಈ ವೇಳೆ ಗಲಾಟೆ ಆಗಿದೆ ಎನ್ನಲಾಗಿದೆ.
ಈ ವೇಳೆ ಕಾಂಗ್ರೆಸ್ ಬೆಂಬಲಿಗರಿಂದ ಬಿಜೆಪಿ ಕಾರ್ಯಕರ್ತ ಹರಿನಾಥ್ ಎಂಬಾತನ ಮೇಲೆ ಹಲ್ಲೆ ಮಾಡಿದ್ದಾರೆ ಅಂತ ಆರೋಪಿಸಿ ಮಡಿವಾಳ ಪೊಲೀಸ್ ಠಾಣೆಗೆ ದೂರು ನೀಡಲಾಗಿದೆ. ಈ ಬಗ್ಗೆ ಪ್ರತಿಕ್ರಿಯಿಸಿದ ಸಂಸದ ತೇಜಸ್ವಿ ಸೂರ್ಯ (Tejaswi Surya), ಸೋಮವಾರ ರಾತ್ರಿಯೊಳಗೆ ಪೊಲೀಸರು ಕ್ರಮ ಕೈಗೊಂಡಿಲ್ಲ ಅಂದ್ರೆ ಉಗ್ರ ಪ್ರತಿಭಟನೆ ಮಾಡೋದಾಗಿ ಎಚ್ಚರಿಕೆ ಕೊಟ್ಟಿದ್ದಾರೆ.