ಧಾರವಾಡ: ಹುಬ್ಬಳ್ಳಿ, ಧಾರವಾಡ ಪಶ್ಚಿಮ ವಿಧಾನಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಅರವಿಂದ ಬೆಲ್ಲದ ಅವರಿಗೆ ಸಮಗಾರ ಸಮಾಜದ ಮುಖಂಡರೊಬ್ಬರು ಬೆಲ್ಲದ ಮೇಲಿನ ಅಭಿಮಾನಕ್ಕಾಗಿ ಪಾದರಕ್ಷೆಗಳನ್ನು ಉಡುಗೊರೆಯಾಗಿ ನೀಡಿದ್ದಾರೆ. ಅಭಿಮಾನಿ ಕೊಟ್ಟ ಈ ಪಾದರಕ್ಷೆಗಳನ್ನು ಬೆಲ್ಲದ ಅವರು ತಮ್ಮ ತಲೆಯ ಮೇಲಿಟ್ಟುಕೊಂಡು ಅಭಿಮಾನಿಗೆ ವಿಶೇಷವಾದ ಧನ್ಯವಾದ ಹೇಳಿದ್ದಾರೆ.
12ನೇ ಶತಮಾನದಲ್ಲಿ ಸಮಗಾರ ಹರಳಯ್ಯ ಹಾಗೂ ಅವರ ಪತ್ನಿ ಕಲ್ಯಾಣಮ್ಮನವರು ತಮ್ಮ ತೊಡೆಯ ಚರ್ಮ ತೆಗೆದು ಚಪ್ಪಲಿ ಮಾಡಿ ಬಸವಣ್ಣನವರಿಗೆ ನೀಡಿದ್ದರು. ಆ ಬಸವಣ್ಣನವರನ್ನು ನಾವು ನೋಡಿಲ್ಲ. ನೀವು ನಮ್ಮ ಸಮಾಜದ ಮೇಲೆ ಇಟ್ಟ ಅತೀವ ಕಾಳಜಿಗಾಗಿ ನಮ್ಮ ಈ ಅಳಿಲು ಸೇವೆ ಎಂದು ಸಮಗಾರ ಸಮಾಜದವರು ಹೇಳಿದ್ದಾರೆ.
12ನೇ ಶತಮಾನದಲ್ಲಿ ಹರಳಯ್ಯನವರು ಮಾಡಿಕೊಟ್ಟ ಚಪ್ಪಲಿಯನ್ನು ಬಸವಣ್ಣನವರು ತಮ್ಮ ತಲೆಯ ಮೇಲೆ ಇಟ್ಟುಕೊಂಡಿದ್ದರು ಎನ್ನುತ್ತಲೇ ಬೆಲ್ಲದ ಕೂಡ ಆ ಚಪ್ಪಲಿಯನ್ನು ತಮ್ಮ ತಲೆಯ ಮೇಲಿಟ್ಟುಕೊಂಡು ಸಮಗಾರ ಸಮಾಜದ ಮುಖಂಡರಿಗೆ ವಿಶೇಷವಾದ ಕೃತಜ್ಞತೆ ಸಲ್ಲಿಸಿದ್ದಾರೆ. ಈ ವೀಡಿಯೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್ ಆಗಿದೆ.